ಮಲೇಬೆನ್ನೂರು, ಆ.28- ಜಿಗಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಬುಧವಾರ ಸಂಘದ ಅಧ್ಯಕ್ಷ ಬಿ.ಎಸ್.ಕುಬೇರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಸಿಇಓ ಎನ್.ಎನ್.ತಳವಾರ್ ಅವರು, 2023 – 24ನೇ ಸಾಲಿನ ವಾರ್ಷಿಕ ವರದಿ ಮಂಡಿಸಿ ಮಾತನಾಡಿ, ಸಂಘವು 1954 ರಲ್ಲಿ ನೋಂದಣಿಯಾಗಿದ್ದು, 70 ವರ್ಷಗಳನ್ನು ಪೂರೈಸಿದೆ.
ಜಿಗಳಿ, ಜಿ.ಬೇವಿನಹಳ್ಳಿ, ಹಳ್ಳಿಹಾಳ್, ವಡೆಯರ ಬಸಾವಪುರ ಗ್ರಾಮಗಳ ವ್ಯಾಪ್ತಿ ಹೊಂದಿರುವ ಸಂಘವು ಈ ವರ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 12.90 ಕೋಟಿ ರೂ. ಕೆಸಿಸಿ ಸಾಲ ಮತ್ತು 1.48 ಕೋಟಿ ರೂ. ತೋಟಗಾರಿಕೆ ಸಾಲ ಹಾಗೂ 2.12 ಕೋಟಿ ರೂ. ಜಾಮೀನು ಸಾಲ ನೀಡಿದ್ದು, 19.50 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಎನ್.ಎನ್.ತಳವಾರ್ ತಿಳಿಸಿದರು.
ಈ ವೇಳೆ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷ ಹಳ್ಳಿಹಾಳ್ ಗ್ರಾಮದ ಹೆಚ್.ವೀರನಗೌಡ ಅವರು, ನಮ್ಮ ಸಂಘವು ಜಿಲ್ಲಾ ಮಟ್ಟದಲ್ಲಿ ನಂ. 1 ಸ್ಥಾನದಲ್ಲಿದೆ. ಇದಕ್ಕೆ ಅನೇಕರ ಶ್ರಮವಿದ್ದು, ಸಂಘದ ಇನ್ನಷ್ಟು ಪ್ರಗತಿಗೆ ಎಲ್ಲರೂ ಶ್ರಮಿಸಬೇಕು. ಈ ವರ್ಷದ ಲಾಭಾಂಶವನ್ನು ಸಂಘದ ಅಭಿವೃದ್ಧಿಗೆ ನೀಡೋಣ ಎಂದರು.
ಗ್ರಾ.ಪಂ. ಮಾಜಿ ಉಪಾಧ್ಯಕ್ಷರೂ ಆದ ನಂದಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಗೌಡ್ರ ಬಸವರಾಜಪ್ಪ ಮಾತನಾಡಿ, ಸಂಘದ ಪ್ರಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಂಘದ ಸಂಸ್ಥಾಪಕ ಅಧ್ಯಕ್ಷರ ಭಾವಚಿತ್ರ ಹಾಕುವಂತೆ ಸಲಹೆ ನೀಡಿದರು.
ಸಂಘದ ಮಾಜಿ ಅಧ್ಯಕ್ಷರೂ, ಹಾಲಿ ನಿರ್ದೇಶಕರಾದ ಡಿ.ಹೆಚ್.ಮಂಜುನಾಥ್ ಮಾತನಾಡಿ, ಜಿ.ಆನಂದಪ್ಪ ಅವರು, ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಮ್ಮ ಸಂಘಕ್ಕೆ ಹೆಚ್ಚಿನ ಸಾಲ ಸೌಲಭ್ಯ ಸಿಕ್ಕಿತು ಎಂದರು.
ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷರೂ ಆದ ಸಂಘದ ಮಾಜಿ ಅಧ್ಯಕ್ಷ ಜಿ.ಆನಂದಪ್ಪ ಮಾತನಾಡಿ, ನಮ್ಮ ಸಂಘದಲ್ಲಿ ನ್ಯೂನತೆಗಳಿಗಿಂತ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ, ಎಲ್ಲರೂ ಕೆಲಸ ಮಾಡಿದ್ದಾರೆ. ಸಂಘದ ಪ್ರಗತಿಗೆ ನಮ್ಮ ನಾಲ್ಕು ಗ್ರಾಮಗಳ ಜನರ ಒಗ್ಗಟ್ಟು ಕಾರಣವಾಗಿದೆ. ಹಾಗಾಗಿ ನಮ್ಮ ಸಂಘ ಜಿಲ್ಲೆಯಲ್ಲಿ ನಂ.1 ಸ್ಥಾನಕ್ಕೆ ಬಂದಿದೆ. ಸಂಘದಿಂದ ಸಾಮಾ ಜಿಕ ಕಾರ್ಯಕ್ರಮಗಳಿಗೂ ಒತ್ತು ಕೊಡಿ ಎಂದು ಆನಂದಪ್ಪ ಸಲಹೆ ನೀಡಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ವಿ.ನಾಗರಾಜ್, ಎಕ್ಕೆಗೊಂದಿ ರುದ್ರಗೌಡ ಎಂ.ಬಸವರಾಜಪ್ಪ, ಗ್ರಾ.ಪಂ. ಸದಸ್ಯ ಹೋಬಳಿ ಆನಂದಗೌಡ ಮಾತನಾಡಿದರು.
ಸಂಘದ ಉಪಾಧ್ಯಕ್ಷ ಖಾಸಿಂ ಸಾಬ್, ನಿರ್ದೇಶಕರಾದ ಜಿ.ಎಂ.ಪ್ರಕಾಶ್, ಸಿ.ಎನ್.ಪರಮೇಶ್ವರಪ್ಪ, ಜಿ.ಬಸವರಾಜಪ್ಪ, ಶ್ರೀಮತಿ ಈರಮ್ಮ, ಶ್ರೀಮತಿ ಲಲಿತಮ್ಮ, ಎನ್.ಕರಿಬಸಪ್ಪ, ಎ.ಕೆ.ರಂಗಪ್ಪ, ಗ್ರಾಮದ ಮುಖಂಡರಾದ ಜಿ.ಎಂ.ಆನಂದಪ್ಪ, ಬಿ.ಎಂ. ದೇವೇಂದ್ರಪ್ಪ, ಕೆ.ಎಸ್.ನಂದ್ಯಪ್ಪ, ನಾಗಸನಹಳ್ಳಿ ಮಹೇಶ್ವರಪ್ಪ, ಜಿ.ಪಿ.ಹನುಮಗೌಡ, ಬಿ.ನಿಂಗಾಚಾರಿ, ಮುದ್ದಪ್ಳ ಶಂಕ್ರಪ್ಪ, ಎಂ.ಜಯ್ಯಣ್ಣ, ಗ್ರಾ.ಪಂ. ಸದಸ್ಯ ಕೆ.ಜಿ.ಬಸವರಾಜ್, ಬಸಾಪುರದ ಮಹಾಂತಯ್ಯ, ಪತ್ರಕರ್ತ ಪ್ರಕಾಶ್, ಸಂಘದ ಸಿಬ್ಬಂದಿಗಳಾದ ಬಸವರಾಜ್, ಚಂದ್ರಪ್ಪ, ಚಮನ್, ಮಂಜುನಾಥ್ ಸೇರಿದಂತೆ ಇನ್ನೂ ಅನೇಕರು ಸಭೆಯಲ್ಲಿದ್ದರು. ನಿವೃತ್ತ ಶಿಕ್ಷಕ ಜಿ.ಆರ್.ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ಎಕ್ಕೆಗೊಂದಿ ರುದ್ರಗೌಡ ಸ್ವಾಗತಿಸಿದರು. ಎನ್.ಎನ್.ತಳವಾರ್ ವಂದಿಸಿದರು.