ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಕಾರ್ಯಕ್ರಮ ನಿರೂಪಣಾಧಿಕಾರಿ ಗುರುರಾಜ್
ದಾವಣಗೆರೆ, ಆ. 26 – ವಾರಾಂತ್ಯದಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳ ಕನಸುಗಳಿಗೆ ಬಣ್ಣ ತುಂಬುವ ಕೆಲಸವನ್ನು ಜಿಲ್ಲಾ ಬಾಲ ಭವನ ಮಾಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಕಾರ್ಯಕ್ರಮ ನಿರೂಪಣಾಧಿಕಾರಿ ಗುರುರಾಜ್ ಹೇಳಿದರು.
ನಗರದ ಜಿಲ್ಲಾ ಬಾಲಭವನದಲ್ಲಿ ಸೋಮವಾರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ಜಿಲ್ಲಾ ಬಾಲಭವನ ಸಮಿತಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ವಿಶೇಷ ವಾರಾಂತ್ಯ ಚಟುವಟಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳು ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಪ್ರಭಾವಿತರಾಗಿದ್ದಾರೆ. ಅವರ ಕಲಿಕೆಯ ಹಸಿವನ್ನು ನೀಗಿಸಲು ಸಂಪನ್ಮೂಲ ವ್ಯಕ್ತಿಗಳು ಸದೃಢರಾಗಬೇಕಿದೆ. ಮಕ್ಕಳ ಕನಸುಗಳಿಗೆ ಬಣ್ಣ ತುಂಬುವ ಕೆಲಸವನ್ನು ಜಿಲ್ಲಾ ಬಾಲ ಭವನ ವಾರಾಂತ್ಯ ಶಿಬಿರದ ಮೂಲಕ ಮಾಡುತ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಒಂದೊಂದು ಶಾಲೆಯಿಂದ 50 ಮಕ್ಕಳನ್ನು ಬಾಲಭವನಕ್ಕೆ ಆಹ್ವಾನಿಸಿ, ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ಬಾಲ ಭವನವನ್ನು ಮಕ್ಕಳ ಸ್ನೇಹಿಯಾಗಿ ರೂಪಿಸಿರುವುದರ ಜೊತೆಗೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಮಕ್ಕಳ ಕಲಿಕೆಗೆ ಉತ್ತಮವಾದ ವಾತಾವರಣವನ್ನು ನಿರ್ಮಾಣ ಮಾಡಬೇಕು. ಕಲ್ಲನ್ನು ಮೇಲಕ್ಕೆ ಎಸೆದರೆ ಪುನಃ ಅದು ಕೆಳಗೆ ಬೀಳುತ್ತದೆ. ಅನೇಕ ಗ್ರಹ, ನಕ್ಷತ್ರಗಳು ಹಾಗೂ ಆಕಾಶ ಕಾಯಗಳು ಬೀಳದಂತೆ ಅಂತರಿಕ್ಷದಲ್ಲಿ ಏಕೆ ತೇಲುತ್ತವೆ? ಸೂರ್ಯ, ಚಂದ್ರ, ತಾರೆಗಳಿಗೆ ಬೆಳಗುವ ಬಲ ಬಂದಿದ್ದು ಹೇಗೆ? ಎಂಬ ಮಕ್ಕಳ ಕುತೂಹಲ ಭರಿತ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಲು ಮುಂದಾದಾಗ ಕಲಿಕೆ ಅರ್ಥ ಪೂರ್ಣಗೊಂಡು ಮಕ್ಕಳು ಉಲ್ಲಾಸದಿಂದ ಕಲಿಯಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಬಾಲಭವನವನ್ನು ಅಭಿವೃದ್ಧಿ ಪಡಿಸಲು ಜಿಲ್ಲೆಯ ಹಿರಿಯ ಅಧಿಕಾರಿಗಳು ಯೋಜನೆ ರೂಪಿಸಿದ್ದು, ಕೆಲವೇ ದಿನಗಳಲ್ಲಿ ಉದ್ಯಾನವನ, ಕ್ರೀಡಾ ಆಟಿಕೆಗಳು, ಪುಟಾಣಿ ರೈಲು ಕಾರ್ಯಾರಂಭ ಮಾಡಲಾಗುತ್ತದೆ.
ಬಾಲಭವನದ ಚಟುವಟಿಕೆಗಳಿಗೆ ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ ಚಟುವಟಿಕೆ ಸಾಮಗ್ರಿಗಳನ್ನು ಒದಗಿಸಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮತ್ತು ಜಿಲ್ಲಾ ಕಾರ್ಯದರ್ಶಿ ಎಂ. ಗುರುಸಿದ್ಧಸ್ವಾಮಿ ಅವರಿಗೆ ಕೃತಜ್ಞತೆ ತಿಳಿಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮತ್ತು ಜಿಲ್ಲಾ ಕಾರ್ಯದರ್ಶಿ ಎಂ. ಗುರುಸಿದ್ಧಸ್ವಾಮಿ, ಜಿಲ್ಲಾ ಬಾಲಭವನ ಕಾರ್ಯಕ್ರಮ ಸಂಯೋಜಕಿ ಎಸ್.ಬಿ. ಶಿಲ್ಪ, ಸಂಪನ್ಮೂಲ ವ್ಯಕ್ತಿ ಡಿ.ಕೆ. ಲಕ್ಷ್ಮಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.