ಕಳಸಾರೋಹಣದಿಂದ ಕುಟುಂಬದ ಆರ್ಥಿಕ ಅಭಿವೃದ್ಧಿ

ಕಳಸಾರೋಹಣದಿಂದ ಕುಟುಂಬದ ಆರ್ಥಿಕ ಅಭಿವೃದ್ಧಿ

ಮುಷ್ಟೂರಿನಲ್ಲಿ ‘ತ್ರಿವೇಣಿ’  ಸಂಗಮ ದೇವಸ್ಥಾನದ ಉದ್ಘಾಟನೆಯಲ್ಲಿ ಲಿಂಗದಹಳ್ಳಿ  ಶ್ರೀ  ವೀರಭದ್ರ ಶಿವಾಚಾರ್ಯ ಸ್ವಾಮೀಜಿ

ರಾಣೇಬೆನ್ನೂರು, ಆ. 26-    ದೇವಸ್ಥಾನ ಕಟ್ಟಿಸಿದರೆ ಸಾಲದು, ಆ ದೇವಸ್ಥಾನಕ್ಕೆ ಕಳಸಾ ರೋಹಣ ಮಾಡಿದರೆ ಹೊನ್ನ ಕಳಸವಿಟ್ಟಂತೆ. ಆಗ ಗ್ರಾಮದಲ್ಲಿ ಶಾಂತಿ, ನೆಮ್ಮದಿಯ ಜೊತೆಗೆ ಪ್ರತಿಯೊಂದು ಕುಟುಂಬದ ಆರ್ಥಿಕ ಅಭಿವೃದ್ಧಿ ಯಾಗಿ ಸಂತಸದ ಬೀಡಾಗುತ್ತದೆ ಎಂದು ಲಿಂಗದಹಳ್ಳಿ ಹಿರೇಮಠದ   ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು. 

ಸ್ಥಳಾಂತರಗೊಂಡ ಹೊಸ ಮುಷ್ಟೂರು ಗ್ರಾಮದಲ್ಲಿ ಪ್ರಪ್ರಥಮವಾಗಿ ಕಟ್ಟಿಸಿದ ಆಂಜನೇಯ, ವಿಘ್ನೇಶ್ವರ ಮತ್ತು ಈಶ್ವರ ದೇವರುಗಳ ‘ತ್ರಿವೇಣಿ’ ಸಂಗಮ ದೇವಸ್ಥಾನದ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ದೇವಸ್ಥಾನದ ಉದ್ಘಾಟನೆ ಮತ್ತು ಕಳಸಾರೋಹಣ ಕಾರ್ಯಕ್ರ ಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.  

ಒಂದು ಮನೆಯನ್ನು ಕೆಡವಿ, ಇನ್ನೊಂದು ಕಡೆ ಕಟ್ಟುವುದೇ ಬಹಳಷ್ಟು ದುಸ್ತರ. ಅಂತಹದರಲ್ಲಿ ಹೋರಾಟಗಾರ   ರವೀಂದ್ರಗೌಡ ಎಫ್. ಪಾಟೀಲರು,   ನದಿ ದಡದಲ್ಲಿದ್ದು ಪದೇ ಪದೇ ನೆರೆ ಹಾವಳಿಗೆ ತುತ್ತಾಗುತ್ತಿದ್ದ ಈ ಇಡೀ ಮುಷ್ಟೂರು ಗ್ರಾಮವನ್ನೇ   ಎತ್ತರದ ಪ್ರದೇಶ ದಲ್ಲಿ ಕಟ್ಟಿರುವುದು ಸಾಮಾನ್ಯ ವಿಷಯವೇನಲ್ಲ. ಇದು ಅವರ ಬಹುದೊಡ್ಡ ಸಾಧನೆಯಾಾಗಿದೆ  ಎಂದು ಪ್ರಶಂಸೆ ವ್ಯಕ್ತಪಡಿಸಿದರು. 

ನೂತನ ಆಂಜನೇಯ ಮೂರ್ತಿ  ಗ್ರಾಮದೊಳಗೆ ಪ್ರವೇಶಿಸುವ ಮುನ್ನ ಗ್ರಾಮದ ಸುಮಂಗಲಿಯರಿಂದ ಪೂರ್ಣ ಕುಂಭದೊಂದಿಗೆ ಬಾಜಾ ಭಜಂತ್ರಿ, ಭಜನಾ ಮೇಳದೊಂದಿಗೆ ಅದ್ಧೂರಿಯಾಗಿ  ಜರುಗಿದ ಮೆರವಣಿಗೆಗೆ ರಾಣೇಬೆನ್ನೂರಿನ ಹಿರೇಮಠದ ಶನೇಶ್ವರ ಮಂದಿರದ ಪೀಠಾಧ್ಯಕ್ಷರಾದ  ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಚಾಲನೆ ನೀಡಿದರು. 

ಶ್ರೀ ಶಿವಯೋಗಿ  ಸ್ವಾಮಿಗಳು ಮಾತನಾಡಿ, ಶ್ರಾವಣ ಮಾಸದ ಈ ಶುಭ ಸಂದರ್ಭದಲ್ಲಿಯೇ ಈ ದೇವಸ್ಥಾನ ಉದ್ಘಾಟನೆ ಮಾಡಿಸಿ, ದೇವಸ್ಥಾನದ ಕಳಸವನ್ನೂ ಕಡಿಮೆ ಅವಧಿಯಲ್ಲಿಯೇ  ನಿರ್ಮಿಸಿದ್ದು,  ಇದಕ್ಕೆ ಕಾರಣರಾಗಿರುವ ರವೀಂದ್ರಗೌಡ ಪಾಟೀಲರ ಕಾರ್ಯ ಶ್ಲ್ಯಾಘನೀಯ ಎಂದರು. 

ಕೊನೆಯ ದಿನದ ವೇದಿಕೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ  ಶಾಸಕ ಪ್ರಕಾಶ ಕೋಳಿವಾಡ   ಅವರು ಗ್ಯಾರಂಟಿ ಯೋ ಜನೆಗಳಿಂದ ಬಡ ಜನತೆಗೆ ಆಗುತ್ತಿರುವ ಅನು ಕೂಲಗಳ ಬಗ್ಗೆ ಎಳೆ-ಎಳೆಯಾಗಿ ವಿವರಿಸಿದರು. 

ಇದೇ ಸಂದರ್ಭದಲ್ಲಿ ಗ್ರಾಮದ  ಮಹಿಳೆ  ಲತಾ ಬಿ. ಯಲ್ಲಕ್ಕ ಎಂಬುವರು ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣ ಕೂಡಿಟ್ಟು ಖರೀದಿಸಿದ ಫ್ರಿಜ್ ಮತ್ತು ಟಿ.ವಿ.ಯನ್ನು ಶಾಸಕರು ಉದ್ಘಾಟಿಸಿದರು. ಆ ಫ್ರೀಜ್‍ ಮೇಲೆ ಮುಖ್ಯಮಂತ್ರಿ,  ಸಚಿವ ಸತೀಶ ಜಾರಕಿಹೊಳಿ, ಪ್ರಕಾಶ ಕೋಳಿವಾಡರಿದ್ದ ಭಾವಚಿತ್ರಗಳು ಎಲ್ಲರ ಗಮನ ಸೆಳೆದವು. 

ವೇದಿಕೆ ಮೇಲೆ  ರವೀಂದ್ರಗೌಡ ಪಾಟೀಲ, ಚಂದ್ರಣ್ಣ ಎಚ್. ಬೇಡರ, ಮಾಜಿ ಯೋಧ ಗಂಗಾಧರ ಕಮ್ಮಾರ, ಬಿ.ಡಿ. ದೇವರಮನಿ, ಗ್ರಾ.ಪಂ. ಉಪಾಧ್ಯಕ್ಷೆ ಚಂದ್ರಮ್ಮ ಹಿರೇಮರದ, ಹರಿಹರಗೌಡ ಪಾಟೀಲ, ಪ್ರಶಾಂತರಡ್ಡಿ ಯರೇಕುಪ್ಪಿ, ದಿಳ್ಳೆಪ್ಪ ಗಂಗಣ್ಣನವರ, ಬಸವ ರಾಜ ಯಲ್ಲಕ್ಕನವರ ಮುಂತಾದವರಿದ್ದರು. 

ಶಿಕಾರಿಪುರದ ವೇದಮೂರ್ತಿ ಗಂಗಾಧರಯ್ಯ ಶಾಸ್ತ್ರಿಗಳು ಧಾರ್ಮಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. 

error: Content is protected !!