ಜೈವಿಕ ಇಂಧನವೇ ಮುಂದಿನ ಪರ್ಯಾಯ ಶಕ್ತಿ ಮೂಲ

ಜೈವಿಕ ಇಂಧನವೇ ಮುಂದಿನ ಪರ್ಯಾಯ ಶಕ್ತಿ ಮೂಲ

ಆವರಗೊಳ್ಳದ ಉಪನ್ಯಾಸದಲ್ಲಿ ಜಿಲ್ಲಾ ಪಂಚಾಯತ್‍ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಡಾ. ಸುರೇಶ್ ಬಿ. ಇಟ್ನಾಳ್

ದಾವಣಗೆರೆ, ಆ.26-   ಮುಂಬರುವ ದಿನಗಳಲ್ಲಿ ಜೈವಿಕ ಇಂಧನವೇ  ಪರ್ಯಾಯವಾಗಲಿದೆ.  ಪಳೆಯುಳಿಕೆಯಿಂದ ಈಗ ದೊರೆಯುತ್ತಿರುವ ಇಂಧನವು ಮುಂದೊಂದು ದಿನ ಖಾಲಿಯಾಗುವ ಸಂಭವವಿದ್ದು ಇದಕ್ಕೆ ಪರ್ಯಾಯವಾಗಿ ಜೈವಿಕ ಇಂಧನವನ್ನು ಸಿದ್ಧಗೊಳಿಸುವ ಅವಶ್ಯಕತೆ ಇದೆ  ಎಂದು ಜಿಲ್ಲಾ ಪಂಚಾಯತ್‍ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಡಾ. ಸುರೇಶ್ ಬಿ. ಇಟ್ನಾಳ್ ಹೇಳಿದರು,  

ಅರಣ್ಯ ಇಲಾಖೆ ಹಾಗೂ ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರ,   ಇವರುಗಳ ಸಂಯುಕ್ತಾಶ್ರಯದಲ್ಲಿ ಆವರಗೊಳ್ಳ ಗ್ರಾಮದ ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜಿನಲ್ಲಿ  ಆಯೋಜಿಸಿದ್ದ ‘ವಿಶ್ವ ಜೈವಿಕ ಇಂಧನ ದಿನಾಚರಣೆ’  ಉದ್ಘಾಟಿಸಿ ಅವರು ಮಾತನಾಡಿದರು.

 ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ  ಡಾ. ದೇವರಾಜ ಟಿ. ಎನ್. ಉಪನ್ಯಾಸ ನೀಡಿ,  1893 ರಲ್ಲಿ ಜರ್ಮನಿಯ ವಿಜ್ಞಾನಿ ಸರ್ ರಾಡಾಲ್ಫ್ ಡೀಸೆಲ್‌ರವರು ಮೊದಲ ಬಾರಿಗೆ ಶೇಂಗಾ ಎಣ್ಣೆಯಿಂದ ಡೀಸೆಲ್ ತಯಾರಿಸಿ ಇಂಜಿನ್‍  ಚಾಲನೆ ಮಾಡಿದ್ದರು, ಇದರ ನೆನಪಿಗೋಸ್ಕರ       ವಿಶ್ವ ಜೈವಿಕ ಇಂಧನ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದೇವೆ. ಅರಣ್ಯ ಪ್ರದೇಶಗಳಲ್ಲಿ ಹಾಗೂ ರೈತರ ಜಮೀನುಗಳಲ್ಲಿ ದೊರೆಯುವ ಹೊಂಗೆ, ಬೇವು, ಸಿಮರೂಬ, ಹಿಪ್ಪೆ ಮುಂತಾದ ಮರಗಳ ಬೀಜದಿಂದ ಎಣ್ಣೆ ತಯಾರಿಸಿ ಅದರಿಂದ ಜೈವಿಕ ಡೀಸೆಲ್ ಉತ್ಪಾದಿಸುವ ಕಾರ್ಯವನ್ನು ಸರ್ಕಾರ ಕಳೆದ 15 ವರ್ಷಗಳಿಂದ ತ್ವರಿತಗತಿಯಲ್ಲಿ ಕೈಗೆತ್ತಿಕೊಂಡಿದೆ.  ರೈತರು ಜೈವಿಕ ಇಂಧನ ಮರಗಳನ್ನು ಬೆಳೆದು   ಹೆಚ್ಚಿನ  ಆದಾಯ ಗಳಿಸುವ ಅವಕಾಶವಿದೆ ಎಂದು ತಿಳಿಸಿದರು.  

ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಸ್ತರಣಾ ತಜ್ಞ ಜೆ.ರಘುರಾಜ್ ಜೈವಿಕ ಇಂಧನ ಉತ್ಪಾದನೆಯ ವಸ್ತು ಪ್ರದರ್ಶನದ ಬಗ್ಗೆ ಮಾಹಿತಿ ನೀಡಿದರು. ಸ್ಪೂರ್ತಿ ಸರ್ಕಾರೇತರ ಸಂಸ್ಥೆಯ  ರೂಪ ನಾಯ್ಕ  ಪ್ರಾಸ್ತಾವಿಕವಾಗಿ ಮಾತನಾಡಿದರು.   ಉಪ ಅರಣ್ಯ ಸಂರಕ್ಷಣಾಧಿಕಾರಿ  ಡಾ. ಗೋಪ್ಯಾ ನಾಯ್ಕ  ಸ್ವಾಗತಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ  ಡಾ. ಶಶಿಧರ್ ಕೆ.  ಉಪಸ್ಥಿತರಿದ್ದರು. ಆವರಗೊಳ್ಳ ಗ್ರಾಮ ಪಂಚಾಯತಿ ಸದಸ್ಯರು, ಪದವಿಪೂರ್ವ ವಿದ್ಯಾರ್ಥಿಗಳು, ಜಿಲ್ಲೆಯ ಎನ್. ಆರ್. ಎಲ್. ಎಂ. ಯೋಜನೆಯ ಕೃಷಿ ಸಖಿಯರು ಭಾಗವಹಿಸಿದ್ದರು.

error: Content is protected !!