ಅರ್ಹ ಕಟ್ಟಡ ಕಾರ್ಮಿಕರು ಮಾತ್ರವೇ ಇಲಾಖೆಯ ಸೌಲಭ್ಯ ಪಡೆದುಕೊಳ್ಳಬೇಕು

ಅರ್ಹ ಕಟ್ಟಡ ಕಾರ್ಮಿಕರು ಮಾತ್ರವೇ ಇಲಾಖೆಯ ಸೌಲಭ್ಯ ಪಡೆದುಕೊಳ್ಳಬೇಕು

ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಕರೆ

ಹೊನ್ನಾಳಿ, ಆ. 26 – ಅರ್ಹ ಕಟ್ಟಡ ನಿರ್ಮಾಣ ಕಾರ್ಮಿಕರು ಮಾತ್ರವೇ ಕಾರ್ಮಿಕ ಇಲಾಖೆಯಿಂದ ಸಿಗುತ್ತಿರುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಶಾಸಕ ಡಿ.ಜಿ.ಶಾಂತನಗೌಡ ಅವರು ಕರೆ ನೀಡಿದರು.

ಟಿಬಿ ವೃತ್ತದ ಕಾರ್ಮಿಕ ಕಚೇರಿಯ ಆವರಣದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಿಟ್‍ಗಳನ್ನು ವಿತರಿಸಿ ಅವರು ಮಾತನಾಡಿದರು.

ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ, ಮದುವೆಗೆ ಧನಸಹಾಯ ಸೇರಿದಂತೆ ಹಲವಾರು ಸೌಲಭ್ಯಗಳಿದ್ದು ಅರ್ಹ ಕಟ್ಟಡ ಕಾರ್ಮಿಕರು ಮಾತ್ರವೇ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು.

ಕಾರ್ಮಿಕ ಇಲಾಖೆ ವತಿಯಿಂದ ಸಾಕಷ್ಟು ಸೌಲಭ್ಯಗಳು ಸಿಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಲ್ಲದವರು ಕಾರ್ಮಿಕ ಇಲಾಖೆಯ ಕಾರ್ಡ್‍ಗಳನ್ನು ಪಡೆದಿರುವ ಬಗ್ಗೆ ವಿಧಾನ ಸೌಧದಲ್ಲಿ ಆಡಳಿತ ಪಕ್ಷದವರು ಮತ್ತು ವಿರೋಧ ಪಕ್ಷದವರೂ ಕೂಡ ಗಂಭೀರವಾಗಿ ಚರ್ಚೆ ನಡೆಸಿದ್ದು ಒಂದು ವೇಳೆ ಅನರ್ಹರು ಕಾರ್ಮಿಕ ಇಲಾಖೆಯ ಕಾರ್ಡ್‍ಗಳನ್ನು ಪಡೆದಿದ್ದರೆ ಅದು ಕಾನೂನು ರೀತ್ಯಾ ಶಿಕ್ಷಾರ್ಹ ಅಪರಾಧವೆಂದು ಎಚ್ಚರಿಸಿದರು.

ಕಾರ್ಮಿಕ ನಿರೀಕ್ಷಕರಾದ ಮುಮ್ತಾಜ್ ಅವರಿಗೆ ಅರ್ಹ ಕಾರ್ಮಿಕರಿಗೇ ಮಾತ್ರವೇ ಇಲಾಖೆಯ ಸೌಲಭ್ಯಗಳನ್ನು ವಿತರಿಸಬೇಕು, ಯಾವುದೇ ಕಾರಣಕ್ಕೂ ಅನರ್ಹರಿಗೆ ಕಾರ್ಮಿಕ ಇಲಾಖೆಯಿಂದ ಕಾರ್ಡ್‍ಗಳು ಸಿಗದಂತೆ ಕ್ರಮ ಜರುಗಿಸುವಂತೆ ಹಾಗೂ ಈಗಾಗಲೇ ಅನರ್ಹರು ಇಲಾಖೆಯಲ್ಲಿ ನೋಂದಣಿಯಾಗಿದ್ದರೆ ಅವುಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಜರುಗಿಸುವಂತೆ ಸೂಚಿಸಿದರು.

ಕಾರ್ಮಿಕ ನಿರೀಕ್ಷಕಿ ಮುಮ್ತಾಜ್ ಬೇಗಂ ಮಾತನಾಡಿ ಹಿರಿತನದ ಆಧಾರದ ಮೇಲೆ ಇಲಾಖೆಯು ನಿರ್ಧರಿಸಿದ ಕಾರ್ಮಿಕರಿಗೆ ಮಾತ್ರವೇ ಸೌಲಭ್ಯಗಳನ್ನು ಇಂದು ವಿತರಿಸಲಾಗುತ್ತಿದ್ದು ಈಗ ಸೌಲಭ್ಯಗಳು ಸಿಗದಿರುವವರಿಗೆ ಮತ್ತೆ ಸೌಲಭ್ಯಗಳನ್ನು ಕೊಡಲಾಗುತ್ತದೆ ಯಾರೂ ಚಿಂತಿಸುವ ಅಗತ್ಯವಿಲ್ಲವೆಂದು ತಿಳಿಸಿದರು.

ಇಂದು ಗಾರೆ ಕೆಲಸಗಾರರಿಗೆ 750, ಮಹಿಳಾ ಕಾರ್ಮಿಕರಿಗೆ 850 ನ್ಯೂಟ್ರೀಷಿಯನ್ ಮತ್ತು ಗಾರೆ ಸಹಾಯಕರಿಗೆ 130 ಕಿಟ್‍ಗಳನ್ನು ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ದೂರುಗಳು ಬಂದ ಹಿನ್ನೆಲೆಯಲ್ಲಿ 2000ಕ್ಕೂ ಹೆಚ್ಚು ಅನರ್ಹ ಕಾರ್ಮಿಕರ ಕಾರ್ಡ್‍ಗಳನ್ನು ಇದುವರೆಗೂ ರದ್ದುಪಡಿಸಲಾಗಿದ್ದು ಇಲಾಖೆ ವತಿಯಿಂದ ಅನರ್ಹರು ಕಾರ್ಮಿಕ ಕಾರ್ಡ್‍ಗಳನ್ನು ಪಡೆದಿದ್ದು, ಕಂಡುಬಂದರೆ ನಿರಂತರವಾಗಿ ಕಾರ್ಡ್‍ಗಳನ್ನು ರದ್ದು ಪಡಿಸುವ ಕೆಲಸವನ್ನು ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ವಕ್ತಾರ ದರ್ಶನ್ ಬಳ್ಳೇಶ್ವರ್, ಕಾರ್ಮಿಕ ಇಲಾಖೆಯ ಪ್ರದೀಪ್, ನಾಗರಾಜ್, ಕಾರ್ಮಿಕ ಮುಖಂಡರಾದ ಕೊತುಂಬರಿ ರಾಜಪ್ಪ, ರಘು ಹವಳಿ, ನಟರಾಜ್, ಸೊರಟೂರು ಹನುಮಂತಪ್ಪ, ಮೋಹನ್, ಮಾರಿಕೊಪ್ಪ ಚಂದ್ರು, ಅಣ್ಣಪ್ಪ, ಗಣೇಶಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!