ನಗರದಲ್ಲಿ ಇಂದು ಮಡಿವಾಳ ಮಾಚಿದೇವರ ಸಂಸ್ಮರಣೋತ್ಸವ

ಜಿಲ್ಲಾ ಶ್ರೀ ಮಡಿವಾಳ ಮಾಚಿದೇವ ಸಂಘ, ಮಹಿಳಾ ಸಂಘ ಹಾಗೂ ಮಡಿಕಟ್ಟೆ ಸಮಿತಿ ಇವರ ವತಿಯಿಂದ ಶ್ರೀ ಮಡಿವಾಳ ಮಾಚಿದೇವರ ಶ್ರಾವಣ ಮಾಸದ ಸಂಸ್ಮರಣೋತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮಾಚಿದೇವ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 7 ರಿಂದ ಶ್ರೀ ವಿನಾಯಕ, ಶ್ರೀ ಈಶ್ವರ, ಶ್ರೀ ನಂದೀಶ ಮತ್ತು ಶ್ರೀ ಆಂಜನೇಯ ಸ್ವಾಮಿ ಹಾಗೂ ಶ್ರೀ ಮಡಿವಾಳ ಮಾಚಿದೇವಸ್ವಾಮಿಗೆ ರುದ್ರಾಭಿಷೇಕ ಹಾಗೂ ವಿಶೇಷ ಅಲಂಕಾರದೊಂದಿಗೆ ಪೂಜೆಯನ್ನು ನೆರವೇರಿಸಲಾಗುವುದು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಹ ನಡೆಸಲಾಗುವುದು.

ಚಿತ್ರದುರ್ಗ ಮಾಚಿದೇವ ಮಹಾಮಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಮತ್ತು ಮೂಡಬಿದಿರೆಯ ಶ್ರೀ ಕ್ಷೇತ್ರ ಕರಿಂಜೆಯ ಮುಕ್ತಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬೆಳಿಗ್ಗೆ 11.30 ರಿಂದ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಎಂ. ನಾಗೇಂದ್ರಪ್ಪ ವಹಿಸಲಿದ್ದಾರೆ.

ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಮಾಜಿ ಸಚೇತಕ ಡಾ. ಹೆಚ್ ಶಿವಯೋಗಿಸ್ವಾಮಿ, ಮೇಯರ್ ವಿನಾಯಕ ಪೈಲ್ವಾನ್, ಯಶೋಧ ಯಗ್ಗಪ್ಪ, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಎಸ್. ಮಹಾಂತೇಶ್ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನ ಕುಮಾರ್, ಸದಸ್ಯ ಎ. ನಾಗರಾಜ್, ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಎಂ. ವೈ ಸತೀಶ್, ಸಂಘದ ಗೌರವಾಧ್ಯಕ್ಷ ಎಂ.ಎ ಬಸವರಾಜಪ್ಪ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.

error: Content is protected !!