ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ‘ನಾಳೆ ರಾಜಭವನ ಚಲೋ’

  • ಹರಪನಹಳ್ಳಿ ತಾಲ್ಲೂಕು ಘಟಕದಿಂದ ಕರೆ
  • ಹರಪನಹಳ್ಳಿ, ಆ. 25 – ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ನಾಡಿದ್ದು ದಿ. 27 ರಂದು ರಾಜಭವನ ಮುತ್ತಿಗೆ ಹಾಕಲು ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ನಿರ್ಧರಿಸಿದೆ ಎಂದು ಒಕ್ಕೂಟದ ರಾಜ್ಯ ಮುಖಂಡ ಕೋಡಿಹಳ್ಳಿ ಭೀಮಪ್ಪ ತಿಳಿಸಿದ್ದಾರೆ.
  • ಅಂದು ರಾಜ್ಯದ ಎಲ್ಲಾ ಶೋಷಿತ ಸಮುದಾಯಗಳ ಶಕ್ತಿಯನ್ನು ವೃದ್ದಿಸಿಕೊಂಡು ರಾಜ ಭವನ ಮುತ್ತಿಗೆ ಹಾಕುವ ಮೂಲಕ ರಾಜ್ಯಪಾಲರು ಕನ್ನಡ ನಾಡಿನಿಂದ ವಾಪಸ್ ಹೋಗುವವರೆಗೂ ನಿರಂತರವಾಗಿ ಹೋರಾಟ ಮುಂದುವರೆಸುತ್ತೇವೆ ಎಂದು ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಮುಖಂಡರುಗಳಾದ ಎಂ.ವಿ. ಅಂಜಿನಪ್ಪ, ಎಚ್.ಕೆ. ಹಾಲೇಶ್, ಎಚ್.ಬಿ.ಪರಶುರಾಮಪ್ಪ, ಇರ್ಫಾನ್ ಮುದುಗಲ್, ತೆಲಿಗಿ ಮಂಜುನಾಥ್, ಬಿ.ಬಿ.ಹೊಸೂರಪ್ಪ, ವಸಂತಪ್ಪ, ಉದ್ದಾರ ಗಣೇಶ, ಹುಲಿಕಟ್ಟೆ ಚಂದ್ರಪ್ಪ, ಒ.ರಾಮಪ್ಪ, ವೆಂಕಟೇಶ ರೆಡ್ಡಿ, ಅಗ್ರಹಾರ ಅಶೋಕ, ಹಲಗೇರಿ ಮಂಜಪ್ಪ, ಚಲುವಾದಿ ಪರಶುರಾಮ್, ಎಲ್.ಪ್ರಕಾಶ್ ನಾಯ್ಕ, ಎಲ್.ಮಂಜಾನಾಯ್ಕ, ಮೋತಿನಾಯ್ಕ, ಗೋಣಿಬಸಪ್ಪ ತಿಳಿಸಿದ್ದಾರೆ.

ದಾವಣಗೆರೆ, ಆ. 25- ಸಿಎಂ ಸಿದ್ಧರಾಮಯ್ಯ ಅವರನ್ನು ತೇಜೋವಧೆ ಮಾಡುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹಾಗೂ ಬಿಜೆಪಿ, ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ರಾಜ್ಯಪಾಲರ ನಡೆ ಖಂಡಿಸಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ವತಿಯಿಂದ ನಾಡಿದ್ದು ದಿನಾಂಕ 27 ರಂದು ಬೆಳಿಗ್ಗೆ 11 ಗಂಟೆೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಿಂದ ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಮುಖಂಡ ಹೊದಿಗೆರೆ ರಮೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶೋಷಿತ ಸಮುದಾಯಗಳ ನಾಯಕ ಸಿದ್ಧರಾಮಯ್ಯ ಅವರ ತೇಜೋವಧೆಗೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಮುಂದಾಗಿರುವುದು ಸರಿಯಲ್ಲ. ಚುನಾವಣೆಯಲ್ಲಿ ಬಹುಮತದಿಂದ ಆರಿಸಿ ಬಂದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರ ಮೂಲಕ ಷಡ್ಯಂತ್ರ ರೂಪಿಸಿದ್ದಾರೆ. ಇದನ್ನು ವಿರೋಧಿಸಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟಗಳ ಸಹಯೋಗದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.

ಸಿಎಂ ಸಿದ್ದರಾಮಯ್ಯ ತಮ್ಮ 40 ವರ್ಷಗಳ ದೀರ್ಘಾವಧಿ ರಾಜಕೀಯ ಜೀವನದಲ್ಲಿ  ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಅಧಿಕಾರ ನಡೆಸಿದ್ದಾರೆ. ದೇವರಾಜ ಅರಸು ನಂತರ ಹಿಂದುಳಿದ ವರ್ಗಗಳ  ಪ್ರಶ್ನಾತೀತ ನಾಯಕನಾಗಿ ಸರ್ವ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಾ ಬಂದಿದ್ದಾರೆ ಎಂದು ಹೇಳಿದರು.

ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದನ್ನು ಸಹಿಸದ ಬಿಜೆಪಿ ಮತ್ತು ಜೆಡಿಎಸ್  ಪಕ್ಷಗಳು ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಕುತಂತ್ರವನ್ನು ಶೋಷಿತ ಸಮುದಾಯಗಳು ಸಹಿಸುವುದಿಲ್ಲ ಎಂದು ಕಿಡಿಕಾರಿದರು.

ಈ ಬೃಹತ್ `ರಾಜಭವನ ಚಲೋ’ ಕಾರ್ಯಕ್ರಮದಲ್ಲಿ ಶೋಷಿತ ಸಮುದಾಯಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಹೊದಿಗೆರೆ ರಮೇಶ್ ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್. ಜಯದೇವನಾಯ್ಕ, ಹರಿಹರ ಮಾಜಿ ಶಾಸಕ ಎಸ್. ರಾಮಪ್ಪ, ಚಲವಾದಿ ಸಮಾಜದ ಜಿಲ್ಲಾಧ್ಯಕ್ಷ ಎನ್. ರುದ್ರಮುನಿ, ನಗರಸಭೆ ಮಾಜಿ ಅಧ್ಯಕ್ಷ ಬಿ. ವೀರಣ್ಣ, ಮಹಾನಗರ ಪಾಲಿಕೆ ಸದಸ್ಯ ಕೆ.ಚಮನ್‌ಸಾಬ್, ಮುಖಂಡರಾದ ಎಸ್.ಎಸ್. ಗಿರೀಶ್, ಲಿಯಾಖತ್ ಅಲಿ, ಕವಿತಾ ಚಂದ್ರಶೇಖರ್, ಸಲ್ಮಾಬಾನು ಮತ್ತಿತರರು ಉಪಸ್ಥಿತರಿದ್ದರು. 

error: Content is protected !!