ಹರಪನಹಳ್ಳಿ, ಆ.25- ಇಲ್ಲಿನ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ವಿಚಾರವಾಗಿ ಧಾರವಾಡ ಉಚ್ಚ ನ್ಯಾಯಾಲಯದ ಪೀಠ ಹೊರಡಿಸಿದ್ದ ತಡೆಯಾಜ್ಞೆ ಪ್ರಕರಣ ಇತ್ಯರ್ಥಗೊಂಡ ಹಿನ್ನೆಲೆಯಲ್ಲಿ ತಹಶೀಲ್ದಾರ್ ಬಿ.ವಿ. ಗಿರೀಶ್ ಬಾಬು ಪುರಸಭೆಯ ಚುನಾವಣೆಯನ್ನು ಸೆ.2ಕ್ಕೆ ನಿಗದಿ ಪಡಿಸಿದ್ದಾರೆ.
ಕಳೆದ ಆ.21ರಂದು ಈ ಚುನಾವಣೆ ನಿಗದಿಯಾಗಿ ತ್ತು, ಅಂದು ಶಾಸಕರು, ಸಂಸದರು ಸೇರಿದಂತೆ ಎಲ್ಲಾ ಪುರಸಭಾ ಸದಸ್ಯರು ಚುನಾವಣೆ ಜರುಗುವ ಸಭಾಂ ಗಣಕ್ಕೆ ಹಾಜರಾಗಿದ್ದಾಗ, ನ್ಯಾಯಾಲಯದ ತಡೆಯಾಜ್ಞೆ ಮೇರೆಗೆ ಚುನಾವಣೆಯನ್ನು ರದ್ದುಗೊಳಿಸಿತ್ತು.
ಸಾಮಾನ್ಯ ಮಹಿಳೆ ಇರುವ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ 20ನೇ ವಾರ್ಡಿನ ಎಂ. ಪಾತೀಮಾಬಿ ಹಾಗೂ ಬಿಜೆಪಿಯಿಂದ 19ನೇ ವಾರ್ಡಿನ ಕೌಟಿ ಸುಮಾ ನಾಮಪತ್ರ ಸಲ್ಲಿಸಿದ್ದರು. ಪರಿಶಿಷ್ಟ ಜಾತಿಗೆ ಮೀಸಲಾತಿ ಇರುವ ಉಪಾಧ್ಯಕ್ಷ ಸ್ಥಾನಕ್ಕೆ 21ನೇ ವಾರ್ಡಿನ ಕಾಂಗ್ರೆಸ್ ಪಕ್ಷದ ಎಚ್. ಕೊಟ್ರೇಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಪುರಸಭಾ ಸದಸ್ಯ ಟಿ. ವೆಂಕಟೇಶ್ ಮೀಸಲಾತಿ ವಿಚಾರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾಗ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.
ಇದೀಗ ಟಿ. ವೆಂಕಟೇಶ್ ಪ್ರಕರಣವನ್ನು ಹಿಂಪಡೆದ ಹಿನ್ನೆಲೆಯಲ್ಲಿ ನ್ಯಾಯಲಯವು ತಡೆಯಾಜ್ಞೆ ಮುಕ್ತಾಯಗೊಳಿಸಿದೆ. ಆದ್ದರಿಂದ ಮುಂದೂಡಿಕೆ ಆಗಿದ್ದ ಚುನಾವಣೆಯ ದಿನಾಂಕವನ್ನು ತಹಶೀಲ್ದಾರ್ ಮರು ನಿಗದಿ ಪಡಿಸಿದ್ದಾರೆ.