ಜಗಳೂರು : ಜಾನುವಾರುಗಳ ಆರೋಗ್ಯಕ್ಕೆ ಖನಿಜಾಂಶವುಳ್ಳ ಆಹಾರ ಮುಖ್ಯ

ಜಗಳೂರು : ಜಾನುವಾರುಗಳ ಆರೋಗ್ಯಕ್ಕೆ ಖನಿಜಾಂಶವುಳ್ಳ ಆಹಾರ ಮುಖ್ಯ

 ಪಶು ವಿಜ್ಞಾನ ತಜ್ಞ ಡಾ.ಜಿ.ಕೆ. ಜಯದೇವಪ್ಪ ಅಭಿಮತ

ಜಗಳೂರು, ಆ.23- ಜಾನುವಾರುಗಳ ಉತ್ತಮ ಆರೋಗ್ಯಕ್ಕೆ ಸಮತೋಲನ ಖನಿಜಾಂಶವುಳ್ಳ ಆಹಾರ ಮುಖ್ಯ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಪಶುವಿಜ್ಞಾನ ತಜ್ಞ ಡಾ.ಜಿ.ಕೆ. ಜಯದೇವಪ್ಪ ತಿಳಿಸಿದರು.

ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಮತ್ತು ಜಗಳೂರು ಪಶುಪಾಲನಾ ಇಲಾಖೆ ಯಿಂದ ಶುಕ್ರವಾರ ಪರಿಶಿಷ್ಟ ಪಂಗಡದ ಉಪ ಯೋಜನೆಯಡಿ ತಾಲ್ಲೂಕಿನ ಬಸಪ್ಪನಹಟ್ಟಿ ಗ್ರಾಮದಲ್ಲಿ ಆಯೋಜಿಸಿದ್ದ `ಜಂತು ನಿವಾರಣಾ ಹಾಗೂ ಜಾನುವಾರು ಆರೋಗ್ಯ ಶಿಬಿರದಲ್ಲಿ’ ಮಾತನಾಡಿದರು. ಪಶುಪಾಲನೆಯಲ್ಲಿ ಪ್ರಮುಖ ಹಂತಗಳಾದ ಗರ್ಭ ಧರಿಸುವಿಕೆ, ಉತ್ತಮ ಹಾಲಿನ ಇಳುವರಿ ಮತ್ತು ಗುಣಮಟ್ಟದ ಕರುಗಳ ಪಾಲನೆ ಬಗ್ಗೆ ಪಶುಪಾಲಕರು ಗಮನ ಹರಿಸ ಬೇಕು ಹಾಗೂ ಜಾನುವಾರುಗಳ ದೇಹ ತೂಕದ ಅನುಸಾರವಾಗಿ ಪೋಷಕಾಂಶ ಪೂರೈಸುವುದು ಬಹಳ ಮುಖ್ಯ ಎಂದು ತಿಳಿಸಿದರು.

ತಾಲ್ಲೂಕು ಸಹಾಯಕ ಪಶು ನಿರ್ದೇಶಕ ಡಾ. ಲಿಂಗರಾಜ್ ಮಾತನಾಡಿ, ಮೇವಿನ ಬೀಜದ ಕಿಟ್ ಮತ್ತು ರಾಸುಗಳಿಗೆ ಉತ್ತಮ ಲಸಿಕಾ ಶಿಬಿರಗಳನ್ನು ಇಲಾಖೆಯಿಂದ ಒದಗಿಸುತ್ತಿದ್ದು, ರೈತರು ಸದುಪಯೋಗ ಪಡೆಯಬೇಕೆಂದು ಹೇಳಿದರು.

ಗ್ರಾಮದ 130ಕ್ಕೂ ಹೆಚ್ಚು ರಾಸುಗಳಿಗೆ ಜಂತು ಹುಳ ನಿವಾರಣಾ ಔಷಧಿ ಹಾಗೂ ಉಚಿತ ಆರೋಗ್ಯ ಶಿಬಿರವನ್ನು ಪಶು ವೈದ್ಯಾಧಿ ಕಾರಿಗಳಾದ ಡಾ.ಜಿ.ಕೆ ಜಯದೇವಪ್ಪ, ಡಾ. ವೀರೇಶ್, ಡಾ. ಚೇತನ್ ನೆರವೇರಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ ಬಸವನಗೌಡ, ಕೃಷಿ ವಿಜ್ಞಾನಿ ಡಾ.ಟಿ.ಜಿ. ಅವಿನಾಶ್, ರೈತರಾದ ಕೃಷ್ಣಮೂರ್ತಿ, ಶಶಿಕುಮಾರ್ ಹಾಗೂ ಇತರರಿದ್ದರು.

error: Content is protected !!