ಹೊನ್ನಾಳಿ, ಆ.22- ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಸಂಬಂಧವೇ ಇಲ್ಲದ ಪ್ರಕರಣದಲ್ಲಿ ರಾಜ್ಯ ಪಾಲರು ಪ್ರಾಸಿಕ್ಯೂಶನ್‍ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಇಂದು ಬೆಳಿಗ್ಗೆ 11 ಕ್ಕೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯಪಾಲರೇ ಕರ್ನಾಟಕ ಬಿಟ್ಟು ತೊಲಗಿ ಎಂಬ ಎಚ್ಚರಿಕೆಯ ಘೋಷ ವಾಕ್ಯದೊಂದಿಗೆ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳ ಕಾಂಗ್ರೆಸ್ ಪಕ್ಷ, ಅಹಿಂದ ಒಕ್ಕೂಟ, ಸಿದ್ದರಾಮಯ್ಯ ಅಭಿಮಾನಿ ಬಳಗ, ರೈತ ಸಂಘಟನೆಗಳು, ಕಾರ್ಮಿಕ ವರ್ಗ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾನವ ಸರಪಳಿ ನಿರ್ಮಿಸಿ, ಪ್ರತಿಭಟನಾ ಮೆರವಣಿಗೆಯ ಮೂಲಕ ತಾಲ್ಲೂಕು ಕಚೇರಿಗೆ ತಲುಪಿ ರಾಷ್ಟ್ರಪತಿಯವರಿಗೆ ರಾಜ್ಯಪಾಲರ ನಡೆ ಖಂಡಿಸಿ ಮನವಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು. ಸಿದ್ದರಾಮಯ್ಯ ಈ ದೇಶದ ಆಸ್ತಿ, ಅವರನ್ನು ಸಿಎಂ ಗಾದಿಯಲ್ಲಿ ಉಳಿಸಿಕೊಳ್ಳಲು ನಾವೆಲ್ಲರೂ ತೀರ್ಮಾನಿಸಿದ್ದು, ಅದಕ್ಕಾಗಿ ಹೋರಾಟದ ಕರೆ ನೀಡಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಚ್.ಬಿ.ಮಂಜಪ್ಪ, ಆರ್.ನಾಗಪ್ಪ, ಸಣ್ಣಕ್ಕಿ ಬಸವನಗೌಡ, ಡಿ.ಜಿ.ವಿಶ್ವನಾಥ್, ಎಚ್.ಎ.ಉಮಾಪತಿ, ಎ.ಆರ್.ಚಂದ್ರಶೇಖರಪ್ಪ, ಹನುಮನಹಳ್ಳಿ ಬಸವರಾಜಪ್ಪ, ಕೆಂಗಲಹಳ್ಳಿ ಷಣ್ಮುಖಪ್ಪ, ಎಚ್.ಎ.ಗದ್ದಿಗೇಶ್, ಜಿ.ಪಿ.ವರದರಾಜಪ್ಪ ಗೌಡ, ಪುಷ್ಪಾ ರವೀಶ್, ವನಜಾಕ್ಷಮ್ಮ, ಬಣಜಾರ್ ಸಮಾಜದ ಮುಖಂಡ ವಸಂತನಾಯ್ಕ, ಛಲವಾದಿ ಸಮಾಜದ ಕುರುವ ಮಂಜುನಾಥ್, ರುದ್ರೇಶ್ ಕೊಡತಾಳ್, ಕುರುಬ ಸಮಾಜದ ಖಜಾಂಚಿ ಎಚ್.ಎ. ನರಸಿಂಹಪ್ಪ, ಕೆ. ಪುಟ್ಟಪ್ಪ, ಎಚ್.ಡಿ. ವಿಜೇಂದ್ರಪ್ಪ, ಕುಂಬಳೂರು ವಾಗೀಶ್, ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.