ಶಾಲಾ ಶಿಕ್ಷಣ ಸುಧಾರಿಸಲು ಬಿಇಡಿ ಶಿಕ್ಷಣ ಅಭಿವೃದ್ಧಿಯಾಗಲಿ

ಶಾಲಾ ಶಿಕ್ಷಣ ಸುಧಾರಿಸಲು ಬಿಇಡಿ ಶಿಕ್ಷಣ ಅಭಿವೃದ್ಧಿಯಾಗಲಿ

ಬಿಇಎ ಶಿಕ್ಷಣ ಮಹಾವಿದ್ಯಾಲಯದ ಕಾರ್ಯಕ್ರಮದಲ್ಲಿ ಡಾ.ಎಚ್.ವಿ. ವಾಮದೇವಪ್ಪ

ದಾವಣಗೆರೆ, ಆ.22- ಶಾಲಾ ಶಿಕ್ಷಣದ ಗುಣಮಟ್ಟ ಸುಧಾರಿಸಲು ಬಿಇಡಿ ಮತ್ತು ಡಿಇಡಿ ಶಿಕ್ಷಣ ಅಭಿವೃದ್ಧಿಯಾಗಬೇಕು ಎಂದು ತರಳಬಾಳು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ.ಎಚ್.ವಿ. ವಾಮದೇವಪ್ಪ ತಿಳಿಸಿದರು.

ನಗರದ ಬಿಇಎ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಡಾ.ಎಂ.ಸಿ. ಕೌಶಿಕ್‌ ಬರೆದಿರುವ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಜ್ಞಾನ ಸಮಾಜ ನಿರ್ಮಿಸುವ ಉದ್ದೇಶವನ್ನು ಶಿಕ್ಷಣ ಹೊಂದಿದೆ. ಆದ್ದರಿಂದ ಶಿಕ್ಷಕರು ಬೋಧನಾ ವೃತ್ತಿಗೆ ಸೀಮಿತವಾಗದೇ, ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಜ್ಞಾನ ಅಭಿವೃದ್ಧಿಗೊಳಿಸಬೇಕು ಎಂದು ಹೇಳಿದರು.

ಶಿಕ್ಷಕರು ಸರಿಯಾದ ಕೌಶಲ್ಯ ಮನೋಭಾವ ವೃದ್ಧಿಸಿಕೊಳ್ಳದಿದ್ದರೆ, ಮಕ್ಕಳನ್ನು 21ನೇ ಶತಮಾನಕ್ಕೆ ಸಿದ್ಧಗೊಳಿಸಲು ವಿಫಲರಾಗುತ್ತೇವೆ ಎಂದು ಎಚ್ಚರಿಸಿದರು.

ಇಂದಿನ ಪರೀಕ್ಷಾ ಪದ್ದತಿಯ ಶಿಕ್ಷಣದಿಂದ ಮಕ್ಕಳನ್ನು ಎಚ್ಚರಗೊಳಿಸಿ, ಮಕ್ಕಳಲ್ಲಿ ಹೊಸ ಜ್ಞಾನ ನೀಡಬೇಕಿದೆ. ಈ ನಿಟ್ಟಿನಲ್ಲಿ `ರಾಷ್ಟ್ರೀಯ ಶಿಕ್ಷಣ ನೀತಿ’ 10 ಉದ್ದೇಶಗಳನ್ನು ಹೊಂದಿದೆ ಎಂದರು.

ವಿದ್ಯಾರ್ಥಿಗಳ ಜ್ಞಾನ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರಶಿಕ್ಷಣಾರ್ಥಿಗಳು ಸಜ್ಜಾಗಬೇಕು. ಜತೆಗೆ ಸಂವಹನ ಸಾಮರ್ಥ್ಯ ಮೈಗೂಡಿಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.

ಶಾಲಾ ಹಂತದಲ್ಲೆ ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿ ಬಗ್ಗೆ ತಿಳಿಸಬೇಕು ಮತ್ತು ರಾಷ್ಟ್ರಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಮಕ್ಕಳನ್ನು ಬೆಳೆಸಬೇಕು ಎಂದು ಹೇಳಿದರು.

ಶಿಕ್ಷಕರು ಹಾಗೂ ಪ್ರಶಿಕ್ಷಕರಿಗೆ ಉಪಯೋಗವಾಗುವ ಪುಸ್ತಕಗಳನ್ನು ಸರಳವಾದ ಭಾಷೆ ಹಾಗೂ ಉತ್ತಮ ನಿದರ್ಶನದೊಂದಿಗೆ ಡಾ. ಕೌಶಿಕ್‌ ಬರೆದಿದ್ದಾರೆ ಎಂದು ಪ್ರಶಂಸಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಚ್‌.ಕೆ. ಲಿಂಗರಾಜ್‌ ಮಾತನಾಡಿ, ಶಿಕ್ಷಣದಿಂದ ದೇಶದ ಪ್ರಗತಿ ಸಾಧ್ಯ. ಇಂದಿನ ಪ್ರಶಿಕ್ಷಣಾರ್ಥಿಗಳ ಕೈಯಲ್ಲಿ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳ ಭವಿಷ್ಯವಿದೆ ಎಂದು ಹೇಳಿದರು.

ಅನಾರೋಗ್ಯ ಸಮಸ್ಯೆಯಿಂದ ಪುಸ್ತಕ ಬರೆದಿದ್ದೇನೆ. ನನ್ನಲ್ಲಿರುವ ಋಣಾತ್ಮಕ ಅಂಶವನ್ನು ಧನಾತ್ಮಕವಾಗಿ ಪರಿವರ್ತಿಸಿಕೊಂಡಿದ್ದರಿಂದ ಪುಸ್ತಕ ರಚಿಸಲು ಸಾಧ್ಯವಾಯಿತು ಎಂದು ಡಾ.ಎಂ.ಸಿ ಕೌಶಿಕ್‌ ಪ್ರಾಸ್ತಾವಿಕ ಮಾತನಾಡುತ್ತಾ ಭಾವುಕರಾದರು.

ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಆರ್‌.ಎಲ್‌. ಶೈಲಜಾ, ನಿವೃತ್ತ ಪ್ರಾಚಾರ್ಯ ಎಸ್‌. ರಾಜಶೇಖರ್‌, ಡಾ.ಕೆ. ವೆಂಕಟೇಶ್‌, ಡಾ.ಕೆ. ಮುರುಗೇಶ್, ಎಸ್‌. ಚಂದ್ರೇಗೌಡ ಮತ್ತಿತರರು ಉಪಸ್ಥಿತರಿದ್ದರು.

error: Content is protected !!