ಪಠ್ಯೇತರ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನ

ಪಠ್ಯೇತರ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನ

ದಾವಣಗೆರೆ, ಆ. 22- ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ತನ್ಮೂಲಕ ಉನ್ನತ ಸಾಧನೆಗೈಯ್ಯುವಂತೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಎಸ್. ಬಡದಾಳ್ ಕರೆ ನೀಡಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಅನ್ವೇಷಕರು ಆರ್ಟ್ ಫೌಂಡೇಶನ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ 6 ನೇ ಶೈಕ್ಷಣಿಕ ರಂಗಯಾತ್ರೆ ಅಂಗವಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪೂರ್ಣಚಂದ್ರ ತೇಜಸ್ವಿ ಅವರ `ಕೃಷ್ಣೇಗೌಡನ ಆನೆ’ ನಾಟಕ ಪ್ರದರ್ಶನದಲ್ಲಿ ಅವರು ಮಾತನಾಡಿದರು.

ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಸಾಂಸ್ಕೃತಿಕ ಇನ್ನಿತರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ಹಾಕಲು ಸಾಧ್ಯ ಎಂದರು.

ಮೊಬೈಲ್, ವ್ಯಾಟ್ಸಾಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದ ಅತಿಯಾದ ಬಳಕೆಯಿಂದ ತಮ್ಮ ಭವಿಷ್ಯವನ್ನು ಹಾಳು ಮಾಡಿ ಕೊಳ್ಳದೇ ವ್ಯಕ್ತಿತ್ವ ವಿಕಸನಗೊಳ್ಳುವ ಚಟುವಟಿಕೆ ಗಳಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.

ಅವಶ್ಯಕತೆಗೆ ತಕ್ಕಂತೆ ಮತ್ತು ಉತ್ತಮ ವಿಚಾರಗಳಿಗಾಗಿ ಮೊಬೈಲ್ ಬಳಕೆ ಇರಲಿ. ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗುತ್ತವೆ. ಪೋಷಕರು ಸಹ ವಿದ್ಯಾರ್ಥಿಗಳ ಓದಿಗೆ ಹೆಚ್ಚು ಪ್ರೋತ್ಸಾಹಿಸಬೇಕೆಂದರು.

ನಾಟಕೋತ್ಸವ ಉದ್ಘಾಟಿಸಿದ ಐಕಾಂತಿಕ ಸಮುದಾಯದ ಸಹಜ ಕೃಷಿಕ ರಾಘವ ಮತ್ತು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಪೂರ್ಣಚಂದ್ರ ತೇಜಸ್ವಿ ರಚಿಸಿರುವ `ಕೃಷ್ಣಗೌಡನ ಆನೆ’ ನಾಟಕ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿದೆ. ರಂಗಕರ್ಮಿ, ನಿರ್ದೇಶಕ ಎಸ್.ಎಸ್. ಸಿದ್ಧರಾಜು ಅವರ ರಂಗಸೇವೆ, ನಿರ್ದೇಶನ, ರಂಗರೂಪ ಕಾರ್ಯ ಪ್ರಶಂಸನೀಯವಾದುದು. ಅವರ ಶ್ರಮ ಸಾರ್ಥಕ ಎಂದು ಹೇಳಿದರು.

ರಂಗ ಸಂಘಟಕ ಎಸ್.ಎಸ್. ಸಿದ್ದರಾಜ್ ಮತ್ತಿತರರು ಉಪಸ್ಥಿತರಿದ್ದರು. ಸಪ್ತಗಿರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಶಿಕ್ಷಕ ವೃಂದದವರು ಸಂವಾದದಲ್ಲಿ ಪಾಲ್ಗೊಂಡಿದ್ದರು.

error: Content is protected !!