ಬಿಐಇಟಿಗೆ ಅತ್ಯುತ್ತಮ ಯೋಜನೆ ರಾಜ್ಯ ಪ್ರಶಸ್ತಿ

ಬಿಐಇಟಿಗೆ ಅತ್ಯುತ್ತಮ ಯೋಜನೆ ರಾಜ್ಯ ಪ್ರಶಸ್ತಿ

ದಾವಣಗೆರೆ, ಆ. 20 – ರಾಜ್ಯ ವಿಜ್ಞಾನ ಪರಿಷತ್ತು (ಬೆಂಗಳೂರು) ಇವರ ಸಹಯೋಗದೊಂದಿಗೆ ಕಲ್ಬುರ್ಗಿಯ ಶರಣ ಬಸವ ವಿಶ್ವವಿದ್ಯಾಲಯದಲ್ಲಿ ಕಳೆದ ವಾರ ನಡೆದ ರಾಜ್ಯ ಮಟ್ಟದ 47ನೇ ಸಾಲಿನ ವಿದ್ಯಾರ್ಥಿ ಯೋಜನೆ ಕಾರ್ಯಕ್ರಮದಲ್ಲಿ ನಗರದ ಬಿಐಇಟಿ ಕಾಲೇಜಿಗೆ ‘ವರ್ಷದ ಅತ್ಯುತ್ತಮ ಯೋಜನೆ’ ಪ್ರಶಸ್ತಿ ಲಭಿಸಿದೆ.

ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ವಿವಿಧ ಇಂಜಿನಿಯರಿಂಗ್ ಕಾಲೇಜುಗಳಿಂದ ಸುಮಾರು 354 ಯೋಜನೆಗಳು ಪ್ರದರ್ಶಿತಗೊಂಡಿದ್ದವು, ಇವುಗಳಲ್ಲಿ 48 ಯೋಜನೆಗಳು ವರ್ಷದ ಅತ್ಯುತ್ತಮ ಯೋಜನೆ ಪ್ರಶಸ್ತಿಗೆ ಆಯ್ಕೆಯಾಗಿದ್ದವು. ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ವಿವಿಧ ವಿಭಾಗಗಳಿಂದ ಒಟ್ಟು ಐದು ಯೋಜನೆಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿತಗೊಳಿಸಲಾಗಿದ್ದು, ಇವುಗಳಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ‘ಅಂತರ್ಜಲವನ್ನು ಬಳಸಿಕೊಂಡು ಕ್ಷೇತ್ರ ನಿಗಾ ವ್ಯವಸ್ಥೆಯನ್ನು ಹೊಂದಿರುವ ಕೃಷಿ ಉಪಯುಕ್ತ ವಾಹನ’ ಎನ್ನುವ ಯೋಜನೆಗೆ ವರ್ಷದ ಅತ್ಯುತ್ತಮ ಯೋಜನೆ ಪ್ರಶಸ್ತಿ ಲಭ್ಯವಾಗಿದೆ.

ವಿದ್ಯಾರ್ಥಿಗಳಾದ ಸೂರಜ್ ಪ್ರಕಾಶ್ ಕಡೂರ್, ಪ್ರಿಯಾಂಕ ನಿಂಗಪ್ಪ, ಸಹನಾ ರಮೇಶ ಮೇಟಿ ಹಾಗೂ ಸ್ನೇಹ, ರಮೇಶ ಸೊರಟೂರು ಇವರುಗಳು ಡಾ. ಶಿವಕುಮಾರ ಸ್ವಾಮಿಯವರ ಮಾರ್ಗ ದರ್ಶನದಲ್ಲಿ ಯೋಜನೆಯನ್ನು ಪೂರ್ಣಗೊಳಿಸಿ ಪ್ರದರ್ಶಿಸಿದ್ದರು.

ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನದ ಹಣ ನೀಡಿ ಪ್ರಾಂಶುಪಾಲ ಡಾ. ಎಚ್.ಬಿ. ಅರವಿಂದ್ ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ ಮತ್ತು ಆಡಳಿತ ಮಂಡಳಿಯವರು ಸನ್ಮಾನಿಸಿದರು.

error: Content is protected !!