ದಾವಣಗೆರೆ, ಆ. 20- ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ರಾಜೀವ್ಗಾಂಧಿ ಅವರ 80ನೇ ಜನ್ಮ ದಿನ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ನಗರದ ಡಾ. ಶಾಮನೂರು ಶಿವಶಂಕರಪ್ಪ ಭವನದಲ್ಲಿ ಇಂದು ನಡೆಸಲಾಯಿತು.
ಮಹಾನಗರ ಪಾಲಿಕೆ ಸದಸ್ಯ ಚಮನ್ ಸಾಬ್ ಮಾತನಾಡಿ, ರಾಜೀವ್ ಗಾಂಧಿ ಅವರು ಭಾರತದ ಪ್ರಧಾನಮಂತ್ರಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಈ ಎರಡೂ ಮಹತ್ವದ ಹುದ್ದೆಗಳ ಅಧಿಕಾರ ಪಡೆದಿದ್ದು ದುರಂತದ ಸನ್ನಿವೇಶದಲ್ಲಿ. 31ನೇ ಅಕ್ಟೋಬರ್, 1984ರಲ್ಲಿ ತಮ್ಮ ತಾಯಿಯವರ ಬರ್ಬರ ಹತ್ಯೆ ನಂತರ ಅವರು ವೈಯಕ್ತಿಕ ದುಃಖ ಮತ್ತು ರಾಷ್ಟ್ರದ ಹೊಣೆಯನ್ನು ಸಮತೋಲನ, ಘನತೆ ಮತ್ತು ಸಂಯಮದಿಂದ ನಿಭಾಯಿಸಿದರು ಎಂದು ಶ್ಲ್ಯಾಘಿಸಿದರು.
ದೂಡಾ ಅಧ್ಯಕ್ಷರೂ ಆಗಿರುವ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಅವರು ಮಾತನಾಡಿ, ದೇವರಾಜ ಅರಸು ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, ಅವರು ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದರು. ಅಧಿಕಾರವಧಿಯ ದಿನಗಳ ಪ್ರಕಾರ ಅವರು ಮುಖ್ಯಮಂತ್ರಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ಇವರ ಅಧಿಕಾರವಧಿಯಲ್ಲಿ ಹಿಂದುಳಿದ ವರ್ಗದ ಆಯೋಗವನ್ನು ಎಲ್ಜಿ ಹಾವನೂರು ಅವರ ನೇತೃತ್ವದಲ್ಲಿ ಸ್ಥಾಪಿಸಿದರು. ಇವರ ಅಧಿಕಾರವಧಿಯಲ್ಲಿ ರಾಷ್ಟ್ರಪತಿ ಆಡಳಿತವು 2ನೇ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ಬಂದಿತು ಎಂದು ಹೇಳಿದರು.
ಮಹಿಳಾ ಮುಖಂಡರಾದ ಸಲ್ಮಾಬಾನು ಮಾತನಾಡಿದರು. ಉತ್ತರ ವಲಯದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಎಲ್.ಎಂ.ಹೆಚ್. ಸಾಗರ್, ಹನುಮಂತ್ (ಪಾಪಣ್ಣಿ) ಯುವರಾಜ್, ಶುಭಮಂಗಳ, ಕವಿತ ಚಂದ್ರಶೇಖರ, ಲಿಯಾಕತ್ ಅಲಿ, ಹರೀಶ್, ಶಬೀನಾ, ದ್ರಾಕ್ಷಾಯಣಮ್ಮ, ರಾಜೇಶ್ವರಿ, ಮಂಜುಳಮ್ಮ, ಮಂಗಳಮ್ಮ ಹಾಗೂ ಇತರರು ಉಪಸ್ಥಿತರಿದ್ದರು.