ಶ್ರೀ ಪತಂಜಲಿ ಮಹರ್ಷಿ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಹಿರಿಯ ಪ್ರವಚನಕಾರ ವೇದಬ್ರಹ್ಮ ಗೋಪಾಲ ಆಚಾರ್ ಮಣ್ಣೂರ್
ದಾವಣಗೆರೆ, ಆ. 20 – ಗುರುಸ್ಥಾನ ಬಹುದೊಡ್ಡದು. ಅದು ಬೆಲೆ ಕಟ್ಟಲಾಗದ ಸ್ಥಾನ, ಗುರು ಕಾರಣ್ಯ ನಮಗೆ ಇದ್ದರೆ ಸದಾ ನಮ್ಮನ್ನು ರಕ್ಷಿಸುತ್ತದೆ ಎಂದು ಹಿರಿಯ ಪ್ರವಚನಕಾರ ವೇದಬ್ರಹ್ಮ ಗೋಪಾಲ ಆಚಾರ್ ಮಣ್ಣೂರ್ ಅಭಿಪ್ರಾಯಪಟ್ಟರು.
ನಗರದ ಆದರ್ಶ ಯೋಗ ಪ್ರತಿಷ್ಠಾನದ ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ನಿನ್ನೆ ಆಯೋಜಿಸ ಲಾಗಿದ್ದ ಶ್ರೀ ಪತಂಜಲಿ ಮಹರ್ಷಿ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಯದಿ ಹರಿಃ ವೃಷ್ಠತಿ ಗುರು: ರಕ್ಷತಿ, ಯದಿ ಗುರುಃ ವೃಷ್ಠತಿ ಹರಿಃ ಕದಾಪಿ ನ ರಕ್ಷತಿ ಎಂಬಂತೆ ಒಂದು ವೇಳೆ ದೇವರು ನಮ್ಮ ರಕ್ಷಣೆಗೆ ಬಾರದಿದ್ದಲ್ಲಿ ಗುರುವಿನ ಶ್ರೀರಕ್ಷೆಯಿಂದ ನಮಗೆ ರಕ್ಷಣೆ ದೊರೆಯುತ್ತದೆ. ಆದರೆ ಅದೇ ಗುರು ಸಿಟ್ಟಾದರೆ, ಮುನಿಸಿಕೊಂಡರೆ ಯಾವ ದೇವರೂ ನಮ್ಮನ್ನು ರಕ್ಷಿಸಲಾರ, ಗುರುವಿನ ಶಕ್ತಿ ಅಂತಹ ಮಹತ್ವವುಳ್ಳದ್ದು, ಅಂಧಕಾರದಲ್ಲಿ ಮುಳಗಿರುವ ನಮಗೆ ಸರಿಯಾದ ಮಾರ್ಗದರ್ಶನವನ್ನು ನೀಡುವವನೇ ನಿಜವಾದ ಗುರು ಎಂದು ತಿಳಿಸುತ್ತಾ, ಜಗತ್ತಿಗೆ ಪತಂಜಲಿ ಮಹರ್ಷಿಗಳ ಕೊಡುಗೆ ಅಪಾರವಾದದ್ದು, ಪತಂಜಲಿಯು ಯೋಗ ಪಿತಾಮಹರು, ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡಲು ಆಯುರ್ವೇದ ಶಾಸ್ತ್ರ ಮನಸ್ಸಿನ ಮಲಿನವನ್ನು ಕಳೆಯಲು ಯೋಗ ಶಾಸ್ತ್ರವನ್ನು ಪರಿಚಯಿಸಿದ ಮೂಲ ತತ್ವಜ್ಞಾನಿ ಎಂದು ಹೇಳುತ್ತಾ, ಗುರುವಿನ ಶಕ್ತಿಯ ಮಹತ್ವವನ್ನು ಕೆಲವು ಉದಾಹರಣೆಯ ಮೂಲಕ ಸೊಗಸಾದ ಕಥೆಯನ್ನು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನು ಪ್ರತಿಷ್ಠಾನದ ಯೋಗ ತಜ್ಞ ರಾಘವೇಂದ್ರ ಗುರೂಜಿ, ಶ್ರೀ ಪತಂಜಲಿ ಮಹರ್ಷಿ ಜನ್ಮ ರಹಸ್ಯ ಮತ್ತು ಅವರು ವಿಶೇಷವಾಗಿ ಸಂಸ್ಕೃತ ವ್ಯಾಕರಣ ಮಹಾಭಾಷ್ಯ, ಆಯುರ್ವೇದ, ಭರತನಾಟ್ಯ, ಯೋಗ ದರ್ಶನಗಳನ್ನು ಕೊಟ್ಟ ಅಪೂರ್ವ ಕೊಡುಗೆಗಳ ಬಗ್ಗೆ ಸ್ವಾರಸ್ಯಕರವಾದ ಕಥೆಯ ಮೂಲಕ ಸಂಕ್ಷಿಪ್ತವಾಗಿ ಬೆಳಕು ಚೆಲ್ಲಿದರು. ಪ್ರಾರಂಭದಲ್ಲಿ ಅಗ್ನಿಹೋತ್ರ ಹೋಮ ಮಾಡಲಾಯಿತು. ನಂತರ ವೇದಬ್ರಹ್ಮ ಶ್ರೀ ಗೋಪಾಲ ಆಚಾರ್ ಮಣ್ಣೂರ್ ಇವರ ದಿವ್ಯ ಮಾರ್ಗದರ್ಶನದಲ್ಲಿ ಪುರೋಹಿತ ಅಂತರವಳ್ಳಿ ಆರ್. ಮುರಳೀಧರ ಆಚಾರ್ ಮತ್ತು ಶ್ರೀಮತಿ ಲಾವಣ್ಯ ದಂಪತಿ ಷೋಡಶೋಪಚಾರ ಪೂಜಾ ವಿಧಿ ವಿಧಾನಗನ್ನು ನೆರವೇರಿಸಿದರು.
ಈ ಸುಸಂದರ್ಭದಲ್ಲಿ ಅದಮ್ಯ ಕಲಾ ಸಂಸ್ಥೆಯ ಸಂಸ್ಥಾಪಕಿ ಶ್ರೀಮತಿ ಗೀತಾ ಮಾಲತೇಶ್ ಇವರು ಸೊಗಸಾದ ವೀಣಾ ವಾದನ ಸೇವೆಯನ್ನು ಭಕ್ತಿಯಿಂದ ಅರ್ಪಿಸಿದರು ಮತ್ತು ಪ್ರತಿಷ್ಠಾನದಲ್ಲಿ ಒಂದು ವರ್ಷದ ಯೋಗ ಪದವಿ ಶಿಕ್ಷಣ ಪೂರೈಸಿದ ಶ್ರೀಮತಿ ಅಶ್ವಿನಿ ವಾದೋನಿ, ಮಹಾಂತೇಶ್, ಚಂದ್ರ ಎಸ್ ಇವರುಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಹಿರಿಯ ಯೋಗ ಶಿಕ್ಷಕ ಲಲಿತ್‍ಕುಮಾರ್ ವಿ. ಜೈನ್ ನಿರೂಪಿಸಿದರು. ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ಕೆ ಭಕ್ತಿಯನ್ನು ಸಮರ್ಪಿಸಿದ ಹಣಕಾಸು ಸಲಹೆಗಾರ ಹೆಚ್. ಮಂಜುನಾಥ್, ಸಿವಿಲ್ ಇಂಜಿನಿಯರ್ ಸತೀಶ್, ಉಪಹಾರ ಸೇವೆ ಅರ್ಪಿಸಿದ ಸಂತೋಷ್ ಹೆಚ್. ವಿಗ್ರಹ ತರಲು ಸಹಕರಿಸಿದ ಬ್ರಷ್‍ಮ್ಯಾನ್ ನಾಗರಾಜ್ ಮತ್ತು ಕುಟುಂಬದವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಯಶಸ್ವಿಗಾಗಿ ಸಹಕರಿಸಿದ ಶ್ರೀಮತಿ ರೇಖಾ ಕಲ್ಲೇಶ್, ಶ್ರೀಮತಿ ಸಾವಿತ್ರಿ, ಶ್ರೀಮತಿ ಜ್ಯೋತಿಲಕ್ಷ್ಮಿ ಶ್ರೀಮತಿ ರಂಗೋಲಿ ಗೌರಮ್ಮ, ಸಂಧ್ಯಾ ಮಂಗಳೂರು, ವೇದಿಕೆಯನ್ನು ಸಿದ್ದಪಡಿಸಿದ ಯಕ್ಷ ರಂಗದ ಭಾಸ್ಕರಣ್ಣ, ಭರತ್ ಬಿ.ಎನ್. ಅವರನ್ನು ಅಭಿನಂದಿಸಲಾಯಿತು.
ಕಲಾವಿದ ಎನ್.ಟಿ. ಮಂಜುನಾಥ್, ಯೋಗ ಗುರು ಕೆ. ಕರಿಬಸಪ್ಪ, ವನಿತಾ ಯೋಗ ಕೇಂದ್ರದ ಪ್ರಕಾಶ್ ಉತ್ತಂಗಿ, ಮಾಲತೇಶ್, ಕೊಟ್ರೇಶ್, ಬಾಬಾರಾಮ್ ದೇವ್ ನೇರ ಶಿಷ್ಯ ಸುನಿಲ್‍ಕುಮಾರ್ ಎನ್.ವಿ., ಶ್ರೀಮತಿ ಅಂಜಲಿದೇವಿ, ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಸುಮನ್, ಯೋಗ ಶಿಕ್ಷಕಿ ಶ್ರೀಮತಿ ರತ್ನಮ್ಮ ಇನ್ನಿತರರು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು.