ತನ್ನ `ಬುದ್ಧಿವಂತಿಕೆ’ಯಿಂದ ತಾನೇ ಕುಸಿಯಲಿದೆಯೇ ಎ.ಐ.?

ತನ್ನ `ಬುದ್ಧಿವಂತಿಕೆ’ಯಿಂದ ತಾನೇ ಕುಸಿಯಲಿದೆಯೇ ಎ.ಐ.?

ನವದೆಹಲಿ, ಆ. 20 – ಕೃತಕ ಬುದ್ಧಿವಂತಿಕೆ ಕಾರಣದಿಂದಾಗಿ ಆಗಬಹುದಾದ ಬದಲಾವಣೆಗಳ ಬಗ್ಗೆ ವಿಶ್ವದೆಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಆದರೆ, ಕೃತಕ ಬುದ್ಧಿವಂತಿಕೆ ಜನರೇಟಿವ್ ಎಐ ಮಾದರಿಗಳು ತಮ್ಮ ಹೊರೆಗೆ ತಾವೇ ಕುಸಿಯುವ ಕುತೂಹಲ ಮೂಡಿರುವುದು ಇತ್ತೀಚಿನ ಬೆಳವಣಿಗೆ.

ಮನುಷ್ಯರ ಜೊತೆ ಸಹಜವಾಗಿ ಪ್ರತಿಕ್ರಿಯಿಸುವ, ಮನುಷ್ಯರಂತೆ ಪ್ರತಿಕ್ರಿಯೆ ನೀಡುವ ಕೃತಕ ಬುದ್ಧಿವಂತಿಕೆಗೆ ಜನರೇಟಿವ್ ಎ.ಐ. ಎಂದು ಕರೆಯಲಾಗುತ್ತದೆ. ಆದರೆ, ಇಂತಹ ಜನರೇಟಿವ್ ಎ.ಐ. ಮಾದರಿಗಳು ಕುಸಿಯುವ ಸಾಧ್ಯತೆ ಇದೆಯೇ?

2023ರಲ್ಲೇ ಈ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಕುರಿತ ಚರ್ಚೆ ವ್ಯಾಪಕವಾಗಿದೆ. ಅಂತರ್ಜಾಲದಲ್ಲಿ ದಿನೇ ದಿನೇ ಕೃತಕ ಬುದ್ಧಿವಂತಿಕೆ (ಎ.ಐ.) ಮಾಹಿತಿ ಹೆಚ್ಚಾಗುತ್ತಿದೆ. ಮುಂದಾನೊಂದು ಕಾಲದಲ್ಲಿ ಎ.ಐ. ಮಾಹಿತಿಯೇ ತುಂಬಿಕೊಂಡು, ಇದರಿಂದ ಎ.ಐ. ಆಧರಿತ ಮಾದರಿಗಳು ಮೂರ್ಖವಾಗಲಿವೆ ಎಂದು ಕೆಲವರು ಹೇಳುತ್ತಿದ್ದಾರೆ. ಇದನ್ನೇ ಎ.ಐ. ಮಾದರಿಗಳ ಕುಸಿತ ಎಂದು ಬಣ್ಣಿಸಲಾಗುತ್ತಿದೆ.

ಆಧುನಿಕ ಎ.ಐ. ವ್ಯವಸ್ಥೆಗಳು ಅಂತರ್ಜಾಲದಲ್ಲಿ ದೊರೆಯುವ ವಿಷಯಗಳನ್ನು ತಿಳಿದುಕೊಂಡು ಕಾರ್ಯನಿರ್ವಹಿಸುತ್ತವೆ. ಈ ಮಾಹಿತಿಯನ್ನು ಎ.ಐ. ವ್ಯವಸ್ಥೆಗಳು ಯಾವ ರೀತಿ ಬಳಸುತ್ತವೆ ಎಂಬುದರ ಮೇಲೆ ಅವುಗಳ ಬುದ್ಧವಂತಿಕೆ ನಿರ್ಧಾರವಾಗುತ್ತದೆ.

ಆದರೆ, ಎಲ್ಲ ಮಾಹಿತಿಗಳೂ ಉಪಯುಕ್ತವಾಗಿರು ವುದಿಲ್ಲ. ಗುಣಮಟ್ಟದ ಮಾಹಿತಿ ಮಾತ್ರ ಬುದ್ಧಿವಂತಿಕೆಗೆ ಉಪಯುಕ್ತ. ಓಪನ್‌ಎಐ, ಗೂಗಲ್, ಮೆಟಾ ಹಾಗೂ ಎನ್‌ವಿಡಿಯಾ ಸೇರಿದಂತೆ ದೈತ್ಯ ಟೆಕ್ ಕಂಪನಿಗಳು ಗುಣಮಟ್ಟದ ಮಾಹಿತಿಯನ್ನು ತಮ್ಮ ಎ.ಐ. ವ್ಯವಸ್ಥೆಗೆ ಒದಗಿಸುತ್ತಿವೆ. ಆದರೆ, 2022ರ ನಂತರ ದೊಡ್ಡ ಪ್ರಮಾ ಣದಲ್ಲಿ ಅಂತರ್ಜಾಲದಲ್ಲಿ ಎ.ಐ. ಒದಗಿಸಿದ ಮಾಹಿತಿ ಹರಡಿದೆ. ಎ.ಐ. ಮೂಲಕ ಪಡೆಯಲಾದ ಮಾಹಿತಿಯನ್ನು ಜನರು ದೊಡ್ಡ ಪ್ರಮಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮನುಷ್ಯರು ರೂಪಿಸುವ ಮಾಹಿತಿಗಿಂತ ಎ.ಐ. ರೂಪಿಸುವ ಮಾಹಿತಿ ಕಡಿಮೆ ವೆಚ್ಚದ್ದಾಗಿದೆ. 

ಆದರೆ, ಮನುಷ್ಯರು ರೂಪಿಸುವ ಗುಣಮಟ್ಟದ ಮಾಹಿತಿ ಇಲ್ಲದಿದ್ದರೆ ಎ.ಐ. ವ್ಯವಸ್ಥೆಗಳು ಬುದ್ಧಿವಂತ ವಾಗುವ ಬದಲು ಮೂರ್ಖವಾಗುತ್ತಾ ಹೋಗುತ್ತವೆ ಎಂದು ಸಂಶೋಧಕರು ತಿಳಿಸುತ್ತಾರೆ. ಎ.ಐ. ಮಾಹಿತಿ ಅತಿಯಾದರೆ ಎ.ಐ.ಗೇ ತೊಂದರೆ ಎಂಬುದು ಇದರರ್ಥ. 

ಹಾಗೆಂದ ಮಾತ್ರಕ್ಕೆ ಬೃಹತ್ ಜನರೇಟಿವ್ ಎ.ಐ. ಕುಸಿಯುತ್ತದೆ ಎಂದೇನೂ ಅಲ್ಲ. ಟೆಕ್ ಕಂಪನಿಗಳು ಈಗಾಗಲೇ ಗುಣಮಟ್ಟದ ಮಾಹಿತಿಗಾಗಿ ಸಾಕಷ್ಟು ಸಮಯ ಹಾಗೂ ಹಣ ವಿನಿಯೋಗಿಸುತ್ತಿವೆ. ಗುಣಮಟ್ಟದ್ದಲ್ಲದ ಹಾಗೂ ಎ.ಐ. ರೂಪಿಸಿದ ಮಾಹಿತಿಯನ್ನು ಶುದ್ಧೀಕರಿಸಲು ಕಂಪನಿಗಳು ಕ್ರಮ ತೆಗೆದುಕೊಳ್ಳುತ್ತಿವೆ. ಆದರೆ, ದೀರ್ಘಾವಧಿಯಲ್ಲಿ ಮನುಷ್ಯ ರೂಪಿಸಿದ ಹಾಗೂ ಎ.ಐ. ರೂಪಿಸಿದ ಮಾಹಿತಿಯನ್ನು ಪ್ರತ್ಯೇಕಿಸುವುದು ಕಠಿಣವಾಗಲಿದೆ. 

ಈಗಾಗಲೇ ಸಮಸ್ಯೆಯ ಬಿಸಿ ಜನರೇಟಿವ್ ಎ.ಐ. ಸಂಸ್ಥೆಗಳಿಗೆ ತಟ್ಟುತ್ತಿದೆ. ಅತಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ಮಾಹಿತಿ ಶುದ್ಧೀಕರಣಕ್ಕೆ ನಿಯೋಜಿಸಿಕೊಳ್ಳುವ ಅಗತ್ಯ ಎದುರಾಗುತ್ತಿದೆ. 

ಇದರ ಜೊತೆಗೆ, ಎ.ಐ. ಮಾದರಿಗಳಿಗೆ ಮನುಷ್ಯರು ರೂಪಿಸುವ ಮಾಹಿತಿ ಒದಗಿಸಲು ಕಂಪನಿಗಳು ಇನ್ನಷ್ಟು ಶ್ರಮ ವಹಿಸಬೇಕಾಗಲಿದೆ. ಈ ವ್ಯವಸ್ಥೆಗಳು ಭಾರೀ ಪ್ರಮಾಣದಲ್ಲಿ ಮಾನವ ರೂಪಿತ ಮಾಹಿತಿ ಬಯಸುತ್ತವೆ. 

ಇಷ್ಟಾದರೂ, ಇದುವರೆಗೂ ಎ.ಐ. ಮಾದರಿಗಳು ಕುಸಿತದ ಗಂಭೀರ ಅಪಾಯ ಎದುರಿಸುವುದು ಕಂಡು ಬಂದಿಲ್ಲ. ಮಾನವ ರೂಪಿತ ಹಾಗೂ ಎ.ಐ. ರೂಪಿತ ಮಾಹಿತಿಗಳು ಜೊತೆ ಜೊತೆಗೆ ಸಾಗುತ್ತಿವೆ.

ಎ.ಐ. ರೂಪಿಸುವ ಅಪಾರ ಮಾಹಿತಿಯಿಂದ ಸದ್ಯಕ್ಕೆ ಮನುಷ್ಯರಿಗೇ ಹೆಚ್ಚು ತೊಡಕುಗಳು ಎದುರಾಗುತ್ತಿವೆ. ಕೋಡಿಂಗ್ ವೆಬ್ ತಾಣವಾದ ಸ್ಟಾಕ್‌ಓವರ್‌ಫ್ಲೋದಲ್ಲಿ ಕಳೆದ ವರ್ಷ ಚಟುವಟಿಕೆಗಳು ಶೇ.16ರಷ್ಟು ಕಡಿಮೆಯಾ ಗಿವೆ. ಇದು ಕೆಲ ಆನ್‌ಲೈನ್‌ ಸಮುದಾಯದಲ್ಲಿ ಮಾನವ ಸಂಪರ್ಕ ಕಡಿಮೆಯಾಗುವುದನ್ನು ತೋರಿಸುತ್ತಿದೆ. 

ಅತಿಯಾದ ಎ.ಐ. ಮಾಹಿತಿ ಕಾರಣದಿಂದ ಅಂತರ್ಜಾಲದಲ್ಲಿ ಕಿರಿಕಿರಿಯ ಜಾಹೀರಾತುಗಳು ಹಾಗೂ ತಪ್ಪು ಮಾಹಿತಿಗಳ ಸಮಸ್ಯೆ ಹೆಚ್ಚಾಗಲಿದೆ. ಎ.ಐ. ಮಾಹಿತಿ ಹಾಗೂ ಮಾನವ ಮಾಹಿತಿಗಳ ನಡುವಿನ ವ್ಯತ್ಯಾಸ ಗುರುತಿಸಲಾಗದೇ ಜನರು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಹೀಗಾಗಿ ಎ.ಐ. ರೂಪಿಸಿದ ಮಾಹಿತಿಯನ್ನು ಗುರುತಿಸಲು ಸಾಧ್ಯವಾಗುವ ಅಗತ್ಯದ ಬಗ್ಗೆ ಪರಿಣಿತರು ಒತ್ತಿ ಹೇಳುತ್ತಿದ್ದಾರೆ.

ಮಾನವ ಸಂವಾದ ಹಾಗೂ ಮಾನವ ರೂಪಿತ ಮಾಹಿತಿ ಅಮೂಲ್ಯವಾಗಿದ್ದು, ಇದನ್ನು ರಕ್ಷಿಸಬೇಕಿದೆ. ನಮ್ಮದೇ ಹಿತಕ್ಕಾಗಿ ಈ ಬಗ್ಗೆ ಕ್ರಮಗಳ ಅಗತ್ಯವಿದೆ ಎಂದು ಪರಿಣಿತರು ಹೇಳುತ್ತಿದ್ದಾರೆ.

error: Content is protected !!