ಬೀಟ್ ವಾಟ್ಸಾಪ್‌ ಗ್ರೂಪ್‌ಗೆ ಸೇರಿ, ಪೊಲೀಸ್ ಸಿಬ್ಬಂದಿಗೆ ಸ್ಪಂದಿಸಿ

ಬೀಟ್ ವಾಟ್ಸಾಪ್‌ ಗ್ರೂಪ್‌ಗೆ ಸೇರಿ, ಪೊಲೀಸ್ ಸಿಬ್ಬಂದಿಗೆ ಸ್ಪಂದಿಸಿ

ಇಂದಿನ ದಿನಗಳಲ್ಲಿ ಸೈಬರ್‌ ಕ್ರೈಮ್‌ಗಳು ಹೆಚ್ಚು ಸಂಭವಿಸುತ್ತಿದ್ದು, ಅನಾಮಿಕ ಕರೆಗಳು ಹಾಗೂ ಲಿಂಕ್‌ಗಳಿಗೆ ಸ್ಪಂದಿಸಬಾರದು. ಸೈಬರ್‌ ಕ್ರೈಮ್‌ಗೆ ತುತ್ತಾದಲ್ಲಿ 1930ಕ್ಕೆ ಕರೆ ಮಾಡಿ ಹಾಗೂ ಸ್ಥಳೀಯ ಠಾಣೆಗೆ ದೂರು ನೀಡಬೇಕು.

ಉಮಾ ಪ್ರಶಾಂತ್‌., ಎಸ್ಪಿ

ಜನ ಸಂಪರ್ಕ ಸಭೆಯಲ್ಲಿ ಎಸ್ಪಿ ಉಮಾ ಪ್ರಶಾಂತ್‌ ಕರೆ

ದಾವಣಗೆರೆ, ಆ. 19 – ಸ್ಥಳೀಯರು ಪೊಲೀಸ್ ಬೀಟ್ ವಾಟ್ಸಾಪ್ ಗ್ರೂಪ್‌ಗೆ ಸೇರುವ ಮೂಲಕ ಬೀಟ್ ಪೊಲೀಸ್ ಸಿಬ್ಬಂದಿಗೆ ಸ್ಪಂದಿಸುವಂತೆ ಎಸ್ಪಿ ಉಮಾ ಪ್ರಶಾಂತ್‌ ಕರೆ ನೀಡಿದರು.

ನಗರ ಉಪವಿಭಾಗದ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಹೂವಿನ ಮಾರ್ಕೆಟ್‌ನಲ್ಲಿ ನಡೆದ ನಾಗರಿಕ ಜನ ಸಂಪರ್ಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಯುವಕರು ಬೀಟ್‌ ಗ್ರೂಪ್‌ಗಳಲ್ಲಿ ಸೇರ್ಪಡೆಯಾದರೆ ಯಾವ ಸಮಯದಲ್ಲಾದರೂ ಅಧಿಕಾರಿಗಳೊಂದಿಗೆ ಸಂವಹನ ಮಾಡಬಹುದು ಎಂದು ಮಾಹಿತಿ ನೀಡಿದರು.

ನಗರದಲ್ಲಿನ ಮಹಿಳೆಯರ ಸುರಕ್ಷತೆಗಾಗಿ `ದಾವಣಗೆರೆ ಸುರಕ್ಷಾ ಆಪ್’ ಇದ್ದು, ಎಲ್ಲ ಮಹಿಳೆಯರು ತಮ್ಮ ಮೊಬೈಲ್‌ಗಳಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡು ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ. ಸಂತೋಷ್ ಮಾತನಾಡಿ, ಅಕ್ರಮ ಚಟುವಟಿಕೆಗಳಲ್ಲಿ ಚಿಕ್ಕ ವಯಸ್ಸಿನ ಮಕ್ಕಳು ಹೆಚ್ಚು ಭಾಗವಹಿಸುತ್ತಿದ್ದಾರೆ. 

ಆದ್ದರಿಂದ ಪಾಲಕರು ತಮ್ಮ ಮಕ್ಕಳ ಮೇಲೆ ನಿಗಾವಹಿಸಬೇಕು ಮತ್ತು  ಕಾನೂನು ಬಾಹಿರ ಚಟುವಟಿಕೆ ತಡೆಯಲು ನಾಗರಿಕರು ಆರಕ್ಷಕರೊಂದಿಗೆ ಸಹಕರಿಸಬೇಕೆಂದು ಹೇಳಿದರು.

ನಗರದಲ್ಲಿ ಕಳ್ಳತನ ಪ್ರಕರಣ ಹೆಚ್ಚು ಸಂಭವಿಸುತ್ತಿದ್ದು, ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಪಾಲಿಕೆ ಸದಸ್ಯೆ ಮೀನಾಕ್ಷಿ ಜಗದೀಶ್ ತಿಳಿಸಿದರು.

ಇದೇ ವೇಳೆ ಆರ್ಎಂಸಿ ಠಾಣಾ ವ್ಯಾಪ್ತಿಯಲ್ಲಿ ಕಳವು, ಸುಲಿಗೆ ಹಾಗೂ ಕಳೆದುಕೊಂಡ ಮೊಬೈಲ್‌ಗಳನ್ನು CEIR ವೆಬ್ ಪೋರ್ಟಲ್‌ ಮೂಲಕ ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ, ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಆಜಾದ್ ನಗರ ವೃತ್ತ ಸಿಪಿಐ ಬಾಲಚಂದ್ರ ನಾಯ್ಕ್, ಆರ್ಎಂಸಿ ಠಾಣೆ ಪಿಎಸ್ಐ ಸಚಿನ್ ಬಿರಾದಾರ್, ಗೋಪಿ ನಾಯ್ಕ್, ಕರೇಗೌಡ್ರು ಮತ್ತಿತರರಿದ್ದರು.

error: Content is protected !!