ಶ್ರೀಮಠದ ದಾಸೋಹದಿಂದ ಅನೇಕರ ಜೀವನ ಸುಭದ್ರ

ಶ್ರೀಮಠದ ದಾಸೋಹದಿಂದ ಅನೇಕರ ಜೀವನ ಸುಭದ್ರ

ಗುರು ಅನ್ನದಾನ ಮಹಾಶಿವಯೋಗಿಗಳ 47ನೇ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಮುಪ್ಪಿನಬಸವಲಿಂಗ ಶ್ರೀ

ದಾವಣಗೆರೆ, ಆ.18- ಗುರು ಅನ್ನದಾನ ಮಹಾಶಿವಯೋಗಿಗಳು ಅಂದು ಶಿಕ್ಷಣ ಸಂಸ್ಥೆ ತೆರೆಯದಿದ್ದರೆ ಹೈದರಾಬಾದ್‌ ಕರ್ನಾಟಕದಲ್ಲಿ ಇಂದು ಹತ್ತಾರು ಸಾವಿರ ಹಿರಿಯ ನಾಗರಿಕರು ಪಿಂಚಣಿ ಪಡೆಯುತ್ತಿರಲಿಲ್ಲ ಎಂದು ಅನ್ನದಾ ನೇಶ್ವರ ಸಂಸ್ಥಾನ ಮಠದ ಮುಪ್ಪಿನಬಸವಲಿಂಗ ಸ್ವಾಮೀಜಿ, ಶ್ರೀಗಳನ್ನು ಸ್ಮರಿಸಿದರು.

ಇಲ್ಲಿನ ಅನ್ನದಾನೇಶ್ವರ ಶಾಖಾ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಗುರು ಅನ್ನದಾನ ಮಹಾಶಿವಯೋಗಿಗಳ 47ನೇ ಪುಣ್ಯಾರಾಧನೆ ಹಾಗೂ ಡಾ.ಅಭಿನವ ಅನ್ನದಾನ ಶ್ರೀಗಳ ತೃತೀಯ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ನಮ್ಮ ದೊಡ್ಡ ಶ್ರೀಗಳು 1913ರಲ್ಲಿ ಸಂಸ್ಕೃತ ಪಾಠ-ಶಾಲೆ ಪ್ರಾರಂಭಿಸುವ ಮೂಲಕ ಹಾಲಕೆರೆ ಮಠವನ್ನು ಶಿಕ್ಷಣ ಕ್ಷೇತ್ರಕ್ಕೆ ಕಾಲಿಡಿಸಿದರು. ಇದರ ತರುವಾಯ ಶ್ರೀ ಮಠವು ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸುವಂತೆ ಶ್ರಮಿಸಿದರು ಎಂದರು.

ಹಾಲಕೆರೆ ಮಠವು ನಾಡಿನ 7 ಜಿಲ್ಲೆಯ 30 ಶಾಖಾ ಮಠಗಳಲ್ಲಿ ಭಕ್ತರಿಗಾಗಿ ದಾಸೋಹ ಕಾರ್ಯ ಮುಂದುವರೆಸಿಕೊಂಡು ಬಂದಿದೆ. 1950ರಿಂದ 2ದಶಕಗಳಲ್ಲಿ ಶ್ರೀಗಳು ನಾಡಿನ ವಿವಿಧೆಡೆ 12 ಉಚಿತ ಪ್ರಸಾದಕೇಂದ್ರ ಪ್ರಾರಂಭಿಸಿದರು ಎಂದು ಗುರುಗಳನ್ನು ನೆನೆದರು.

ಶ್ರೀಗಳು, ಧಾರ್ಮಿಕ ಸೇವೆಯ ಜತೆಗೆ ಸಾಮಾಜಿಕ ಹಾಗೂ ಶೈಕ್ಷಣೀಕ ಸೇವೆಯನ್ನು ಅಪಾರ ಪ್ರಮಾಣದಲ್ಲಿ ಮಾಡಿದ್ದಾರೆ. ಗದಗ ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆ ಇಂದು ಹೆಸರು ವಾಸಿಯಾಗಿದೆ ಎಂದು ಹೇಳಿದರು.

ಸಾಮಾಜಿಕ ಮತ್ತು ಧಾರ್ಮಿಕ ಸಮಾನತೆಗಾಗಿ ಶ್ರಮಿಸಿದ ಗುರುಗಳು, ಲಿಂಗ ಧರಿಸಿದವರನ್ನು ಭಿನ್ನವಾಗಿ ಕಾಣಬಾರದು ಹಾಗೂ ಲಿಂಗವನ್ನು ಯಾವ ಜಾತಿಯವರಾದರೂ ಧರಿಸಬಹುದು ಎಂದು ಮನನ ಮಾಡಿಸಿದ್ದಾರೆ ಎಂದರು.

2ನೇ ಶ್ರೀಗಳ ಪುಣ್ಯಸ್ಮರಣೆಯನ್ನು ಮೂರು ವರ್ಷಗಳಿಂದ ಮಾಡುತ್ತಿದ್ದು, ಇವರು ಶ್ರೀಮಠದ ಶಿಕ್ಷಣದ ಗುಣಮಟ್ಟತೆ ಹೆಚ್ಚಿಸಲು ಗಮನ ಹರಿಸಿದರು ಎಂದು ತಿಳಿಸಿದರು.

ಬದಲಾದ ಜೀವನ ಶೈಲಿಯಿಂದ ಎಲ್ಲರ ಆರೋಗ್ಯ ಹದಗೆಡುತ್ತಿದ್ದು, ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನೂ ಅನ್ನದಾನೇಶ್ವರ ಮಠ ಮಾಡುತ್ತಿದೆ ಎಂದು ಹೇಳಿದರು.

ಆವರಗೊಳ್ಳ ಪುರವರ್ಗ ಮಠದ ಓಂಕಾರ ಶ್ರೀಗಳು ಮಾತನಾಡಿ, ಹಾಲಕೆರೆ ಅನ್ನದಾನೇಶ್ವರ ಮಠವು ಬಹುದೊಡ್ಡ ಸಂಸ್ಥಾನ ಮಠವಾಗಿದೆ. ಸ್ವತಂತ್ರ ಪೂರ್ವದಲ್ಲಿಯೇ ಮನುಕುಲಕ್ಕೆ ತ್ರಿವಿಧ ದಾಸೋಹ ನೀಡುತ್ತಾ ಬಂದ ಕಾರ್ಯ ಶ್ಲಾಘನೀಯ ಎಂದರು.

ಎರೆಸೀಮೆ ಭಕ್ತರು ದಾವಣಗೆರೆ ನಗರದಲ್ಲಿ ಸಂಘಟಿತ ರಾಗಿ ಮಠವನ್ನು ಕಟ್ಟಿ ಅದರ ಬೆಳವಣಿಗೆ ಶ್ರಮಿಸುತ್ತಿದ್ದಾರೆ ಎಂದ ಅವರು, ಮನೆಯಲ್ಲಿ ಮಕ್ಕಳಿಗೆ ಸಂಸ್ಕೃತಿ-ಸಂಸ್ಕಾರವನ್ನು ಕಲಿಸಿ ಧರ್ಮ ಮಾರ್ಗದಲ್ಲಿ ನಡೆಯಲು ಹೇಳಿದರೆ ಕಷ್ಟದಲ್ಲೂ ಸುಖದ ಹಾದಿ ಕಾಣಲಿದೆ ಎಂದು ಹೇಳಿದರು.  

ದೂಡಾ ಅಧ್ಯಕ್ಷ ದಿನೇಶ್‌ ಕೆ. ಶೆಟ್ಟಿ ಮಾತನಾಡಿ, ಮಠಗಳು ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಬದುಕು ನಡೆಸಿದರೆ ಸುಭದ್ರ ಜೀವನ ಕಟ್ಟಿಕೊಳ್ಳಬಹುದು ಎಂದು ದಾವಣಗೆರೆ ವಿವಿಯ ನಿಕಟ ಪೂರ್ವ ಕುಲಸಚಿವ ಡಾ.ಕೆ. ಶಿವಶಂಕರ್‌ ಉಪನ್ಯಾಸ ನೀಡಿದರು.

ಎಸ್‌ಬಿಸಿ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಷಣ್ಮುಖಪ್ಪ, ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಬಡದಾಳ್‌, ಲೆಕ್ಕಪರಿಶೋಧಕ ಮುಂಡಾಸದ ವೀರೆಂದ್ರ ಅವರುಗಳಿಗೆ ಗೌರವ ಶ್ರೀರಕ್ಷೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ವೇಳೆ ಎಸ್‌ಐ ಗುರುಬಸವರಾಜ್‌, ಪತ್ರಕರ್ತರಾದ ವೀರಣ್ಣ ಭಾವಿ, ಕುಮಾರ್‌, ದೇವರಮನಿ ಶಿವಕುಮಾರ್‌ ಮತ್ತಿತರರಿದ್ದರು. 

error: Content is protected !!