ಜಗಳೂರಿನ ತಾಲ್ಲೂಕು ಆಡಳಿತದ ಸ್ವಾತಂತ್ರ್ಯೋತ್ಸವದಲ್ಲಿ ಶಾಸಕ ಬಿ. ದೇವೇಂದ್ರಪ್ಪ
ಜಗಳೂರು, ಆ. 18 – ವಿದ್ಯಾರ್ಥಿ, ಯವಜನರಿಗೆ ದೇಶ ಪ್ರೇಮ ಮತ್ತು ಸಂಸ್ಕಾರಯುತ ಶಿಕ್ಷಣದ ಅಗತ್ಯ ಇದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಬಯಲು ರಂಗ ಮಂದಿರದ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಅಸಂಖ್ಯಾತ ಹೋರಾಟಗಾರರ ತ್ಯಾಗ, ಬಲಿದಾನಗಳಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಮಹನೀಯರ ಆದರ್ಶಗಳನ್ನು ಯುವ ಪೀಳಿಗೆ ಅರಿತುಕೊಳ್ಳಬೇಕು ಎಂದರು.
ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲಾರ. ಆದ್ದರಿಂದ ಪೋಷಕರು ಮಕ್ಕಳಿಗೆ ದೇಶದ ಇತಿಹಾಸ, ದೇಶ ಪ್ರೇಮ ಮತ್ತು ಸಂಸ್ಕಾರಯುತ ಶಿಕ್ಷಣವನ್ನು ನೀಡಬೇಕು ಎಂದು ಸಲಹೆ ನೀಡಿದರು.
ಬಹುತ್ವದಲ್ಲಿ ಏಕತೆ ಸಾರುವ ದೇಶದಲ್ಲಿ ಧರ್ಮಾತೀತ, ಜಾತ್ಯತೀತವಾಗಿ ಸರ್ವರಿಗೂ ನೆಲೆ ನೀಡಿರುವ ಭಾರತಾಂಬೆಯ ವಿಚಾರದಲ್ಲಿ ದೇಶಾಭಿಮಾನದ ಐಕ್ಯತೆಯ ಕೀರ್ತಿ ಪತಾಕಿ ಹಾರಿಸಬೇಕಿದೆ ಎಂದರು.
ನಂಜುಂಡಪ್ಪ ವರದಿಯ ಪ್ರಕಾರ ರಾಜ್ಯದಲ್ಲೇ ಅತಿ ಹಿಂದುಳಿದ ಎರಡನೇ ತಾಲ್ಲೂಕು ಆಗಿರುವ ಜಗಳೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶಿಕ್ಷಣ, ಕುಡಿಯುವ ನೀರು ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದು ಶಾಸಕರು ಭರವಸೆ ವ್ಯಕ್ತಪಡಿಸಿದರು.
ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ 57 ಕೆರೆ ತುಂಬಿಸುವ ಯೋಜನೆಯಲ್ಲಿ ಈಗಾಗಲೇ 30ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿದು ಬಂದಿದೆ. ಬಹು ನಿರೀಕ್ಷಿತ ಅಪ್ಪರ್ ಭದ್ರಾ ಯೋಜನೆ ಕಾಮಗಾರಿಯೂ ಸಹ ಪ್ರಗತಿ ಯಲ್ಲಿದೆ. ಇದರ ಜೊತೆಗೆ 434 ಕೋಟಿ ರೂ. ಗಳ ಬಹು ಗ್ರಾಮ ಕುಡಿಯುವ ನೀರಿನ ಯೋಜ ನೆಗೆ ನೂತನ ಸಂಸದ ಡಾ. ಪ್ರಭಾ ಮಲ್ಲಿಕಾ ರ್ಜುನ್ ಶೀಘ್ರವೇ ಚಾಲನೆ ನೀಡಲಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಪರ್ವ ಆರಂಭವಾಗಿದ್ದು, ಉತ್ತಮ ಮಳೆಯಾಗಿದ್ದು ಉತ್ತಮ ಫಸಲಿನ ನಿರೀಕ್ಷೆಯಲ್ಲಿ ರೈತರು ಇದ್ದಾರೆ. ಮೊನ್ನೆ ಎರಡು ದಿನ ಸುರಿದ ಮಳೆಯಿಂದಾಗಿ ಹಳ್ಳ-ಕೊಳ್ಳ, ಕೆರೆ-ಕಟ್ಟೆಗಳು, ಮೈದುಂಬಿ ಹರಿ ಯುತ್ತಿವೆ. ರೈತರಿಗೆ ಅಲ್ಪಪ್ರಮಾಣದ ಹಾನಿಯಾ ಗಿರಬಹುದು. ಆದರೆ ಮಳೆಯಾಗುತ್ತಿರುವುದನ್ನು ನೋಡಿ ಹರ್ಷ ಪಡಬೇಕಿದೆ ಎಂದರು.
ಧ್ವಜಾರೋಹಣ ನೆರವೇರಿಸಿ ಶುಭ ಸಂದೇಶ ನೀಡಿದ ತಹಶೀಲ್ದಾರ್ ಅವರು, ಮಹಾತ್ಮ ಗಾಂಧೀಜಿ, ಜವಾಹರ್ ಲಾಲ್ ನೆಹರೂ, ವಲ್ಲಭಾಯಿ ಪಟೇಲ್ ಸೇರಿದಂತೆ ಮಹನೀಯರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಭಾರತದ ತ್ರಿವರ್ಣ ಧ್ವಜವನ್ನು ಪ್ರತಿಯೊಬ್ಬರೂ ಗೌರವಿಸುವ ಮೂಲಕ ದೇಶಭಕ್ತಿ ಮೆರೆಯಬೇಕು ಎಂದು ಕರೆ ನೀಡಿದರು.
ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ವಾಡಿಕೆ ಗಿಂತ ಅಧಿಕ ಮಳೆಯಾಗಿದ್ದು. ಉತ್ತಮ ಬೆಳೆ ಬೆಳೆದು ಸಮೃದ್ದಿಯಾಗಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಪೋಲೀಸ್ ಇನ್ಸ್‌ಪೆಕ್ಟರ್ ಶ್ರೀನಿವಾಸ್ ರಾವ್, ಪ.ಪಂ. ಮಾಜಿ ಅಧ್ಯಕ್ಷ ಆರ್.ತಿಪ್ಪೇಸ್ವಾಮಿ, ಸಿದ್ದಪ್ಪ, ಸದಸ್ಯ ರಮೇಶ್ ರೆಡ್ಡಿ, ಲಲಿತಮ್ಮ, ನಿರ್ಮಲ, ಮಂಜಮ್ಮ, ಸೇರಿದಂತೆ ಪ.ಪಂ. ಸದಸ್ಯರುಗಳು, ನಾಮ ನಿರ್ದೇಶಿತ ಸದಸ್ಯ ಶಾಂತಕುಮಾರ್, ಕುರಿಜಯ್ಯಣ್ಣ, ತಾನಾಜಿ ಗೋಸಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಮುಖಂಡ ಪಲ್ಲಾಗಟ್ಟೆ ಶೇಖರಪ್ಪ, ಮಹೇಶ್ವರಪ್ಪ, ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಬಿ. ನಾಗರಾಜ್, ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರೇನಹಳ್ಳಿ ಟಿ.ಬಸವರಾಜ್, ಪ.ಪ. ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ತಾ.ಪಂ ಇಓ ಕೆಂಚಪ್ಪ, ಬಿಇಓ ಹಾಲಮೂರ್ತಿ ಮತ್ತಿತರರು ಇದ್ದರು.