ನಮ್ಮ ಭವ್ಯ ಭಾರತದ ಸ್ವಾತಂತ್ರ್ಯ ಇತಿಹಾಸ ತುಂಬಾ ರೋಚಕ ಮತ್ತು ರೋಮಾಂಚನ. ಸತತ ಹೋರಾಟ, ತ್ಯಾಗ-ಬಲಿದಾನ, ನೂರಾರು ಚಳುವಳಿಗಳ ಪ್ರತಿಫಲವಾಗಿ 1947, ಆಗಸ್ಟ್ 15ರಂದು ಗಳಿಸಿದ ಸ್ವಾತಂತ್ರ್ಯ ಇತಿಹಾಸದ ಮೈಲಿ ಗಲ್ಲು, ಹಲವು ಧರ್ಮ-ಮತ, ಜಾತಿ, ಜನಾಂಗ, ಭಾಷೆ, ಸಂಸ್ಕೃತಿ, ಪ್ರಾಂತಗಳು, ವಿವಿಧತೆಗಳ ನಡುವೆ ಅಖಂಡತೆ ಸಾಧಿಸಿದ ಬಲಾಢ್ಯ ಒಕ್ಕೂಟ ರಾಷ್ಟ್ರ, ಜನಸಂಖ್ಯೆಯಲ್ಲಿ ದ್ವಿತೀಯ ಸ್ಥಾನ ಅತಿ ದೊಡ್ಡ ಪ್ರಜಾ ಪ್ರಭುತ್ವ ಎಂಬ ಹೆಗ್ಗಳಿಕೆ, ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ, ಆವಿಷ್ಕಾರಗಳು, ಸ್ಟಾರ್ಟ್ಆಪ್, ನವೋದ್ಯಮಗಳಲ್ಲಿ ಉದ್ಯಮಶೀಲತೆ, ಕ್ಷಿಪ್ರಗತಿಯ ಡಿಜಿಟಲೀಕರಣ, ಮಾಹಿತಿ ತಂತ್ರಜ್ಞಾನ ಬ್ಯಾಂಕೋದ್ಯಮ, ಶಿಕ್ಷಣ ಆರೋಗ್ಯ, ಕ್ರೀಡೆ, ವ್ಯಾಪಾರ-ವಾಣಿಜ್ಯ, ಕೃಷಿ, ಮೂಲ ಸೌಕರ್ಯಗಳು ಗ್ರಾಮೀಣಾಭಿವೃದ್ಧಿ ಮತ್ತು ಸೇವಾ ವಲಯಗಳಲ್ಲಿ ಗಮನಾರ್ಹ ಸಾಧನೆಯಿಂದಾಗಿ ವಿಶ್ವದ ಐದನೇ ದೊಡ್ಡ ಆರ್ಥಿಕತೆಯಾಗಿ ಜಾಗತೀಕ ಪ್ರಭಾವಿಶಾಲಿ ರಾಷ್ಟ್ರವಾಗಿ ವಿಶ್ವದ ಭೂಪಟದಲ್ಲಿ ಮಾತ್ರವಲ್ಲ, ಶ್ರೇಷ್ಠ ಪ್ರಗತಿಶೀಲ ರಾಷ್ಟ್ರವಾಗಿ ಮೂಡುತ್ತದೆ.
ನಮ್ಮ ಆರ್ಥಿಕಾಭಿವೃದ್ಧಿ ವೇಗ ತೀವ್ರಗೊಳಿಸಲು ಮತ್ತು ಸರ್ವಾಂಗೀಣ ಆರ್ಥಿಕ ಬೆಳವಣಿಗಾಗಿ ಸಮಗ್ರ ದೃಷ್ಟಿಕೋನ ವುಳ್ಳ ಆರ್ಥಿಕ, ಯೋಜನೆಗಳು ಬೇಕು. ನಮ್ಮ ದೇಶಕ್ಕೆ ನಮ್ಮ ದೇಶದ ಅಭಿವೃದ್ಧಿ ಮಾದರಿಯಾಗಬೇಕು. ಜಾಗತೀಕರಣದ ಅಂಧಾನು ಕರಣೆಯಿಂದ ಪರಾವಲಂಬಿಗಳಾಗುವುದು ಬೇಡ. ಭಾರತದ ಆರ್ಥಿಕಾಭಿವೃದ್ಧಿಗೆ ರಚನಾತ್ಮಕ, ಬೌದ್ಧಿಕ ಮತ್ತು ಆಂದೋಲನಾತ್ಮಕ ಪ್ರಯತ್ನಗಳು ಬೇಕು. ಪರಿಸರ-ಸಂರಕ್ಷಣೆ ಮತ್ತು ಸಂವರ್ಧನೆಯೊಂದಿಗೆ ಪ್ರಕೃತಿಯಾಧಾರಿತ ವಿಕಾಸವಾಗಬೇಕು. `ಸಮೃದ್ಧ ಹಳ್ಳಿ ಸಮೃದ್ಧ ದೇಶ’ ಎಂಬ ಪರಿಕಲ್ಪನೆ ಜೀವಂತಿಕೆ ಪಡೆಯಬೇಕು. ಕೃಷಿಯಧಾರಿತ ಕಸಬುಗಳು ವಿಸ್ತರಣೆಯೊಂದಿಗೆ ಸಮೃದ್ಧಿ ಮತ್ತು ಸಂಸ್ಕೃತಿಯ ಮಧ್ಯೆ ಸಮತೋಲನ ಕಾಪಾಡಬೇಕು. ಇದಕ್ಕಾಗಿ 7 E ತತ್ವಗಳನ್ನು ಅನಷ್ಟಾನಗೊಳಿಸಬೇಕು. ಶಿಕ್ಷಣ, ಉದ್ಯೋಗ, ಉದ್ಯಮಶೀಲತೆ, ದಕ್ಷತೆ, ಪರಿಸರ, ಸಮಾನತೆ, ನೈತಿಕತೆ, ಈ ಮೇಲಿನ ಎಲ್ಲಾ ತತ್ವಗಳಿಗೆ ಪ್ರತ್ಯೇಕ ಯೋಜನೆಗಳನ್ನು ರೂಪಿಸಿ, ಕಾಲಬದ್ಧತೆಯಲ್ಲಿ ಪಟ್ಟು ಹಿಡಿದು ಅನುಷ್ಠಾನಕ್ಕೆ ತರಬೇಕು ಮತ್ತು ಸಾರ್ವತ್ರಿಕ ಅನ್ವಯಗೊಳ್ಳಬೇಕು.
ಪ್ರಸ್ತುತ ದೇಶದ ಅಭಿವೃದ್ಧಿಗೆ ಭಯೋತ್ಪಾದನೆ, ನಕ್ಸಲಿಸಂ, ಭ್ರಷ್ಟಾಚಾರಗಳು, ಜಾತೀಯತೆ, ಸ್ವಜನ ಪಕ್ಷಪಾತ, ಕಾಲವಿಳಂಬ, ಇತರೆ ಮಾರಕಗಳಾಗಿವೆ. ದೇಶದ ಸಮಸ್ತ ಜನತೆ ದೇಶಾಭಿಮಾನ, ಸಮಾನತಾ ಮನೋಭಾವ, ಸದಾ ಕಾರ್ಯ ತತ್ಪರರಾಗುವ ಕ್ರಿಯಾಶೀಲತೆಗಳನ್ನು ಮೈಗೂಡಿಸಿಕೊ ಳ್ಳಬೇಕು. ರಾಷ್ಟ್ರಗೀತೆ, ರಾಷ್ಟ್ರಧ್ವಜ, ರಾಷ್ಟ್ರಲಾಂಚನಗಳ ಬಗ್ಗೆ ಗೌರವ ಮತ್ತು ಇವುಗಳ ಆಶಯಗಳನ್ನು ತಿಳಿಸುವ ಅನಿವಾರ್ಯತೆ ಇದೆ ಇಂದು.
ರಾಷ್ಟ್ರಗೀತೆ : ಗುರುದೇವ ರವೀಂದ್ರನಾಥ್ ಠಾಗೋರ್ ಅವರು ಬರೆದ `ಜನಗಣ ಮನ’ ಗೀತೆಯನ್ನು ಜನವರಿ, 24 1950ರಂದು ಕೇಂದ್ರ ಸರ್ಕಾರ ರಾಷ್ಟ್ರಗೀತೆ ಎಂದು ಘೋಷಿಸಿತು. ರಾಷ್ಟ್ರಗೀತೆಯನ್ನು 46 ರಿಂದ 52 ಸೆಕೆಂಡ್‌ಗಳಿಗೆ ಮೀರದಂತೆ ಹಾಡಿ ಮುಗಿಸಬೇಕು.
ನಮ್ಮ ರಾಷ್ಟ್ರಧ್ವಜ :
ದೇಶದ ವಿಭಿನ್ನ ಜಾತಿ, ಧರ್ಮ, ಮತ, ಪಂಗಡ, ಸಂಸ್ಕೃತಿಯ ಜನರನ್ನು ಒಂದೇ ಧ್ವಜದಡಿಯಲ್ಲಿ ನಿಲ್ಲಿಸಿ, ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನವೇ ನಮ್ಮ ರಾಷ್ಟ್ರಧ್ವಜ. ನಮ್ಮ ಪವಿತ್ರ ಭಾರತಾಂಬೆಯ ಕೀರ್ತಿಯು ಮುಗಿಲೆತ್ತರಕ್ಕೆ ಏರಲಿ, ಎಲ್ಲಕ್ಕಿಂತ ಶ್ರೇಷ್ಠವಾದ ರಾಷ್ಟ್ರದ ಧ್ಯೇಯಗಳು ಎಲ್ಲಕ್ಕಿಂತ ಎತ್ತರದಲ್ಲಿ ರಾರಾಜಿಸಲಿ ಎಂಬ ಸಂಕೇತವನ್ನು ನಾಲ್ಕು ದಿಕ್ಕುಗಳಿಗೂ ತಿಳಿಯಪಡಿಸುವುದೇ ನಮ್ಮ ರಾಷ್ಟ್ರಧ್ವಜವನ್ನು ಮೇಲಕ್ಕೆ ಹಾರಿಸುವ ಉದ್ಧೇಶ.
ಭಾರತದ ಸ್ವಾತಂತ್ಯ ಪೂರ್ವ ಚಳುವಳಿಯಲ್ಲಿ ವಿವಿಧ ರೀತಿಯ ಧ್ವಜಗಳನ್ನು ಬಳಸಲಾಗುತ್ತಿತ್ತು. ಇಂದು ನಾವು ಬಳಸುತ್ತಿರುವ ತ್ರಿವರ್ಣ ಧ್ವಜ ಮೊದಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಾಗಿದ್ದ ಈ ಧ್ವಜವನ್ನು ಆಂಧ್ರ ಪ್ರದೇಶದ ಸ್ವಾತಂತ್ರ್ಯ ಹೋರಾಟಗಾರ ಪಿಂಗಳಿ ವೆಂಕಯ್ಯನವರು ರೂಪಿಸಿದರು. ಪಿ. ವೆಂಕಯ್ಯನವರು 1916ರಿಂದ 1921ರ ನಡುವೆ 30 ರಾಷ್ಟ್ರಗಳ ಧ್ವಜಗಳ ಸಮಗ್ರ ಅಧ್ಯಯನ ಮಾಡಿ ಹಾಗೂ ರಾಷ್ಟ್ರನಾಯಕರ ಸಲಹೆಗಳನ್ನು ಪರಿಗಣಿಸಿ ರೂಪಿಸಿದ ಧ್ವಜವನ್ನು 1947, ಜುಲ್ಲೈ 22ರಂದು ರಾಷ್ಟ್ರಧ್ವಜವನ್ನಾಗಿ ಘೋಷಿಸಲಾಯಿತು. ಇದನ್ನು ಶುದ್ಧ ಖಾದಿಯಿಂದಲೇ ತಯಾರಿಸಬೇಕು. ಕೇಸರಿ, ಬಿಳಿ, ಹಸಿರು ಬಣ್ಣಗಳ ಅಳತೆ ಸಮ ಪ್ರಮಾಣದಲ್ಲಿದ್ದು, ನೀಲಿ ಚಕ್ರವು ಹೆಚ್ಚು ಕಡಿಮೆ ಬಿಳಿ ಬಣ್ಣದ ಅಡ್ಡಗಲವಿದ್ದು, ಧ್ವಜದ ಉದ್ಧ ಮತ್ತು ಅಗಲ 3:2ಪ್ರಮಾಣದಲ್ಲಿ ಇರತಕ್ಕದ್ದು.
ರಾಷ್ಟ್ರಧ್ವಜದ ಬಣ್ಣಗಳು :
ಕೇಸರಿ ಬಣ್ಣ : ಧೈರ್ಯ, ಪರಿತ್ಯಾಗ ಮತ್ತು ದೇಶದ ಒಳಿತಿಗಾಗಿ ಬಲಿದಾನಗಳ ಸಂಕೇತ,
ಬಿಳಿ ಬಣ್ಣ : ನಿತ್ಯವೂ ಸತ್ಯಶಾಂತಿಗಳೊಂದಿಗೆ ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಸತ್ಯಮಾರ್ಗದ ಸಂಕೇತ.
ಹಸಿರು ಬಣ್ಣ : ಹಸಿರು ಜೀವರಾಶಿಗಳನ್ನು ಅವಲಂಬಿಸಿ ರುವ ಮನುಷ್ಯ ಮತ್ತು ಭೂಮಿಯ ಸಂಬಂಧಗಳ ಸಂಕೇತ.
ಅಶೋಕ ಚಕ್ರ : ನೀಲಿ ಬಣ್ಣದ ಚಕ್ರವು ತಟಸ್ಥವಾಗಿರದೇ, ಚಲನೆಯಂತೆ ಜೀವಕಳೆಯಿಂದ ಇದ್ದು, ಸತ್ಯಧರ್ಮಗಳೊಂದಿಗೆ ಶಾಂತಿಯುತ ಬದಲಾವಣೆಗಳೊಂದಿಗೆ ಯಶಸ್ಸಿನಿಂದ ಮುನ್ನಡೆವ ಸಂಕೇತ.
ಚಕ್ರದಲ್ಲಿರುವ 24 ಅರಗಳು ನಮ್ಮ ದೇಶವನ್ನು 24 ಗಂಟೆಯಲ್ಲೂ ಸತತ ಪ್ರಗತಿ ಪಥದತ್ತ ಸಾಗಿಸುವ ಚಿಂತನೆಯ ಪ್ರತೀಕವಾಗಿದೆ.
ರಾಷ್ಟ್ರಲಾಂಛನ : ನಮ್ಮ ಜೀವನದ ಶ್ರೇಷ್ಠವಾದ ಮೌಲ್ಯವೇ ಧರ್ಮ, ಧರ್ಮದ ಮಹತ್ವವನ್ನು ಜಗತ್ತಿಗೆ ತಿಳಿಯ ಪಡಿಸುವುದೇ ಈ ಲಾಂಛನದ ಸಂಕೇತವಾಗಿದೆ.
ದಯೆಯೇ ಧರ್ಮದ ಮೂಲವೆಂದು ಬುದ್ಧನ ಅಹಿಂಸಾ ತತ್ವಗಳನ್ನು ವಿಶ್ವದೆಲ್ಲೆಡೆ ಪ್ರಚಾರ ಮಾಡಿದ ಚಕ್ರವರ್ತಿ ಅಶೋಕನ ಹೆಸರನ್ನು ನೆನಪಿಸುತ್ತಾ, ಅಶೋಕನ ಧರ್ಮ ಚಕ್ರದ ಸಾರನಾಥ ಸ್ಥಂಭವೇ ರಾಷ್ಟ್ರ ಧ್ವಜವನ್ನು ಹಾರಿಸುವ ಸ್ಥಂಭವಾಗಿದೆ. ನಾಲ್ಕು ದಿಕ್ಕುಗಳಿಗೆ ಮುಖ ಮಾಡಿ ನಿಂತಿರುವ ಸಿಂಹಗಳು ನಾಲ್ಕು ದಿಕ್ಕುಗಳ ಸಾರ್ವಭೌಮತ್ವವನ್ನು ಪಡೆಯುವ ಸಂಕೇತವಾಗಿದೆ.
ಸತ್ಯ ಮೇವ ಜಯತೆ, ಎನ್ನುವ ಮುಂಡಕೋಪನಿಷತ್ತಿನ ಸೂಕ್ತಿಯು ಸತ್ಯವೊಂದೇ ಗೆಲ್ಲುತ್ತದೆ ಎನ್ನುವ ತತ್ವವನ್ನು ವಿಶ್ವಕ್ಕೆ ಸಾರಿ ಹೇಳುತ್ತದೆ. ಸ್ತಂಭದ ಕೆಳಭಾಗದಲ್ಲಿರುವ ನಾಲ್ಕು ಪ್ರಾಣಿಗಳಾದ ವೃಷಭ, ಕುದುರೆ, ಆನೆ, ಸಿಂಹಗಳು, ಭಾರತೀಯರಾದ ನಾವೆಲ್ಲರೂ ವೃಷಭದಂತೆ ಕಠಿಣ ಪರಿಶ್ರಮ, ಕುದುರೆಯ ವೇಗ, ಆನೆಯ ಶಕ್ತಿ ಹಾಗೂ ಸಿಂಹದಂತೆ ಸಾರ್ವಭೌಮತ್ವವನ್ನು ಪಡೆದು ನಮ್ಮ ದೇಶವನ್ನು ಮುನ್ನಡೆಸಬೇಕೆಂದು ತಿಳಿಸುವ ಸಂಕೇತವಾಗಿದೆ.
ಭಾರತದ ಸರ್ಕಾರ 1950 ಜನವರಿ 26 ರಂದು ಈ ಶಿಲ್ಪವನ್ನು ನಮ್ಮ ರಾಷ್ಟ್ರಲಾಂಛನವನ್ನಾಗಿ ಅಂಗೀಕರಿಸಿದೆ. ಈ ಲಾಂಚನವನ್ನು ಸರ್ಕಾರದ ಮುದ್ರೆಯಾಗಿ ಮಾತ್ರ ಬಳಸಲಾಗುತ್ತದೆ ಹೊರತು ಪಡಿಸಿ ಯಾವುದೇ ಕಂಪನಿ, ಸಂಸ್ಥೆ ಗಳು, ಇತರೆ ಚಿಹ್ನೆಯಾಗಿ ಬಳಸಿದರೆ ಶಿಕ್ಷಾರ್ಹ ಅಪರಾಧ.
ಸ್ವತಂತ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಧ್ವಜಾರೋಹಣ ನಡುವಣ ವ್ಯತ್ಯಾಸ :
ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಧ್ವಜವನ್ನು ಕೆಳಗಿನಿಂದ ಮೇಲಕ್ಕೆ ಎಳೆಯಲಾಗುತ್ತದೆ. ನಂತರ ಅದನ್ನು ಬಿಚ್ಚಲಾಗುತ್ತದೆ. ಇದನ್ನು ಧ್ವಜಾರೋಹಣ ಎಂದು ಕರೆಯಲಾಗುತ್ತದೆ. ಇದನ್ನು ಆಂಗ್ಲ ಭಾಷೆಯಲ್ಲಿ Flag Hoisting ಎನ್ನುತ್ತಾರೆ. ಆದರೆ ಜನವರಿ 26 ಗಣರಾಜ್ಯೋತ್ಸವದ ಸಂದರ್ಭದಲ್ಲಿ ಧ್ವಜವನ್ನು ಮೇಲ್ಭಾಗದಲ್ಲಿ ಕಟ್ಟಲಾಗುತ್ತದೆ. ಅದನ್ನು ಬಿಚ್ಚಲಾಗುತ್ತದೆ. ಸಂವಿಧಾನದಲ್ಲಿ ಇದನ್ನು ಧ್ವಜ ಅನಾವರಣ ಎಂದು ಕರೆ ಯುತ್ತಾರೆ. ಆಗಸ್ಟ್ 15ರಂದು ಕೇಂದ್ರ ಸರ್ಕಾರದ ಮುಖ್ಯಸ್ಥ ರಾದ ಪ್ರಧಾನ ಮಂತ್ರಿಗಳು ಧ್ವಜಾರೋಹಣ ಮಾಡಿದರೆ, ಸಂವಿಧಾನದ ಅನುಷ್ಠಾನ ಸ್ಮರಣಾರ್ಥವಾಗಿ ಆಚರಿಸಲಾಗುವ ಜನವರಿ 26ರಂದು ಸಂವಿಧಾನದ ಮುಖ್ಯಸ್ಥರಾದ ರಾಷ್ಟ್ರಪತಿಗಳು ಧ್ವಜ ಅನಾವರಣ ಮಾಡುತ್ತಾರೆ.
ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಕೆಂಪುಕೋಟೆ ಯಿಂದ ಧ್ವಜಾರೋಹಣ ಮಾಡಲಾಗುತ್ತದೆ. ಗಣರಾಜ್ಯೋ ತ್ವವದ ರಾಜಪಥದಲ್ಲಿ ಧ್ವಜ ಅನಾವರಣ ಮಾಡಲಾಗುತ್ತದೆ.
78ನೇ ಸ್ವಾತಂತ್ಯ್ರದ ದಿನಾಚ ರಣೆಯಲ್ಲಿ ನಾವೆಲ್ಲರೂ ವಿವೇಕ ಯುತ ಆತ್ಮಾವಲೋಕನ ಮಾಡಿ ಕೊಳ್ಳಬೇಕು. I am doing My duty ಎನ್ನುವ ಕಲ್ಪನೆ ಹೋಗಿ
I am Serving My Nation ಎನ್ನುವ ಧೋರಣೆ ಬೇಕು.
– ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ, ದಾವಣಗೆರೆ.