ದಾವಣಗೆರೆ, ಆ. 13- ಬಡಜನರಿಗೆ ನಿವೇಶನ ಮಂಜೂರು ಮಾಡಲು ಜಿಲ್ಲಾಡಳಿತ ಉದ್ದೇಶಿಸಿದ್ದು, ಇದರಿಂದ ನಗರಕ್ಕೆ ಹೊಂದಿಕೊಂಡಿರುವ ಏಕೈಕ ಬಾತಿ ಗುಡ್ಡದ ಪರಿಸರ ಸಂಪೂರ್ಣ ಹಾಳಾಗತ್ತದೆ ಎಂದು ಸಾಮಾ ಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೊಡ್ಡಬಾತಿ ಗ್ರಾಮದ ಕಸಬಾ ಹೋಬಳಿ ಸರ್ವೇ ನಂ. 240 ರ ಹತ್ತಿರ ಸ.ನಂ. 300 ರಲ್ಲಿ ಐದು ಎಕರೆ ಹಾಗೂ ಸ.ನಂ. 301 ರಲ್ಲಿ ಒಂದು ಎಕರೆ ಜಮೀನನ್ನು ನಿವೇಶನ ಮಾಡಿ ಬಡಜನರಿಗೆ ನಿವೇಶನ ಮಂಜೂರು ಮಾಡಲು ಜಿಲ್ಲಾಡಳಿತ ಆದೇಶಿಸಿದೆ ಎಂದರು.
ಬಡವರಿಗೆ ನಿವೇಶನ ಮಂಜೂರು ಮಾಡಲು 2024 ರ ಫೆಬ್ರವರಿ 13 ರಂದು ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿ ಗ್ರಾಮ ಪಂಚಾಯತಿ ಅಧ್ಯಕ್ಷರು ತಹಶೀಲ್ದಾರ್ ಅವರಿಗೆ ಪತ್ರ ಬರೆದಿದ್ದಾರೆ. ಅವರ ಪತ್ರದಂತೆ ದಾವಣಗೆರೆ ವಲಯ ಅರಣ್ಯಾಧಿಕಾರಿಗಳು ಹಾಗೂ ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಭೂ ಮಾಪನ ಇಲಾಖೆಗೆ ಪತ್ರ ಬರೆದಿದ್ದಾರೆ. ಆದರೆ ಹಾಲಿ ಸದರಿ ಸರ್ವೇ ನಂ.ನಲ್ಲಿ ಸುಮಾರು 30 ವರ್ಷಗಳ ಮರ-ಗಿಡಗಳಿವೆ. ವಿವಿಧ ಪ್ರಭೇದದ ಪಕ್ಷಿ ಸಂಕುಲ ಸಹ ವಾಸವಾಗಿದೆ. ಸದರಿ ಸರ್ಕಾರಿ ಜಾಗವನ್ನು ಬಡವರಿಗೆ ನಿವೇಶನ ಮಾಡಲು ಮಂಜೂರು ಮಾಡಲು ಯೋಜಿಸಿದ್ದು, ಮರಗಳನ್ನು ಕಡಿದು, ಮಣ್ಣು ತೆಗೆಯುವುದರಿಂದ ಗುಡ್ಡ ಕುಸಿಯುತ್ತದೆ ಎಂದು ಹೇಳಿದರು.ಅಲ್ಲದೇ ದಾವಣಗೆರೆಗೆ ಹೊಂದಿಕೊಂಡಿರುವ ಏಕೈಕ ಗುಡ್ಡದ ಪರಿಸರ ಸಂಪೂರ್ಣ ಹಾಳಾಗುತ್ತದೆ. ಯಾವುದೇ ಕಾರಣಕ್ಕೂ ಸಹ ಹಾಲಿ ಇರುವ ಮರಗಳನ್ನು ಕಡಿಯಬಾರದು ಎಂದು ಒತ್ತಾಯಿಸಿದರು.
ಅರಣ್ಯ ಇಲಾಖೆ ವರದಿ ನೀಡುವಾಗ ಮರಗಳನ್ನು ಉಳಿಸುವ ಬಗ್ಗೆ ಹಾಗೂ ಅವುಗಳ ಸಂರಕ್ಷಣೆ ಬಗ್ಗೆ ಈ ಪ್ರದೇಶದಲ್ಲಿ ಎಷ್ಟು ಜಾತಿಯ ಮರಗಳಿವೆ ಎಂದು ಅಂಕಿ-ಅಂಶ ನೀಡಿಲ್ಲ. ಅಲ್ಲದೇ ಸರ್ಕಾರಕ್ಕೆ ಈ ಜಾಗದ ಲ್ಲಿ ಗಿಡ, ಮರಗಳಿವೆ. ಇದನ್ನು ನಮ್ಮ ಇಲಾಖೆಗೆ ನೀಡಿ ಎಂದು ಪತ್ರ ಸಹ ಬಂದಿಲ್ಲ. ಏಕಾಏಕಿ ಇಷ್ಟೊಂದು ಮರಗಳನ್ನು ಕಡಿಯಲು ಕಾರಣವೇನು.ಇದರ ಹಿಂದೆ ಭೂ ಮಾಫಿಯಾ ಇರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ, ಕಂದಾಯ ಸಚಿವರು, ಮುಖ್ಯ ಕಾರ್ಯದರ್ಶಿಗಳಿಗೆ, ಅರಣ್ಯ ಸಚಿವರ ಕಚೇರಿಗೆ ಈ-ಮೇಲ್ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೂ ಮನವಿ ಮಾಡಲಾಗಿದೆ ಎಂದರು.
ಯಾವುದೇ ಸರ್ಕಾರಿ ಜಾಗದಲ್ಲಿ ಬೆಳೆದ ಮರ, ಗಿಡಗಳಿದ್ದರೆ ರಾಜ್ಯ ಸರ್ಕಾರ ಅವುಗಳ ಸರ್ವೆ ಮಾಡಿಸಿ, ಪರಿಸರ ಸಂರಕ್ಷಣೆ ಮಾಡಿ, ಜೀವ ಸಂಕುಲದ ಉಳಿವಿಗೆ ಮುಂದಾಗುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಗಿರೀಶ್ ದೇವರಮನಿ,
ಕೆ.ಟಿ. ಗೋಪಾಲಗೌಡ, ಕೆ.ಎನ್. ರವಿಕುಮಾರ್,
ಇ. ಬಸವರಾಜ್, ಶ್ರೀನಿವಾಸ್ ಉಪಸ್ಥಿತರಿದ್ದರು.