ವಿನಯ್‌ ಉಚ್ಚಾಟನೆಗೆ ಶಿಸ್ತು ಸಮಿತಿಗೆ ಶಿಫಾರಸ್ಸು

ವಿನಯ್‌ ಉಚ್ಚಾಟನೆಗೆ ಶಿಸ್ತು ಸಮಿತಿಗೆ ಶಿಫಾರಸ್ಸು

ದಾವಣಗೆರೆ, ಆ.12- ವಿರೋಧ ಪಕ್ಷದವರ ಜತೆ ಸೇರಿ ಮುಖ್ಯಮಂತ್ರಿಗಳಿಗೆ ಅವಮಾನ ಮಾಡಲು ಹೊರಟಿರುವ ಜಿ.ಬಿ. ವಿನಯ್‌ ಕುಮಾರ್‌ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸುವಂತೆ ಶಿಸ್ತು ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಬಿ. ಮಂಜಪ್ಪ ತಿಳಿಸಿದರು.

ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಷ್ಟ-ಸುಖ ಎರಡರಲ್ಲೂ ಶಾಮನೂರು ಕುಟುಂಬ ಇದೆ. ನಮ್ಮ ನಾಯಕರ ಬಗ್ಗೆ ಮಾತನಾಡುವ ನೈತಿಕ ಹಕ್ಕು ವಿನಯ್‌ ಕುಮಾರ್‌ ಅವರಿಗಿಲ್ಲ ಎಂದು ಅವರ  ಹೇಳಿಕೆಗೆ ತಿರುಗೇಟು ನೀಡಿದರು.

ಶಾಮನೂರು ಶಿವಶಂಕರಪ್ಪ ಮತ್ತು ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರು ಮೈಸೂರಿನಲ್ಲಿ ನಡೆದ ಜನಾಂದೋಲನ ಸಭೆಯಲ್ಲಿ ಭಾಗವಹಿಸಿ ಸಿದ್ದರಾಮಯ್ಯ ಅವರಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಮಂಜಪ್ಪ ಅವರು ಸ್ಪಷ್ಟನೆ ನೀಡಿದರು.

ಸಚಿವ ಶಾಮನೂರು ಮಲ್ಲಿಕಾ ರ್ಜುನ್ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಸಿದ್ದರಾಮೋತ್ಸವ ನಡೆದ ಪರಿಣಾಮ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಲು ಸಹಕಾರಿಯಾಯಿತು. ಇಂತಹ ಕಾಳಜಿ ಶಾಮನೂರು ಕುಟುಂಬ ಹೊಂದಿದೆ ಎಂದು ತಿಳಿಸಿದರು.

ಶಾಮನೂರು ಕುಟುಂಬ ಜನಾಂದೋಲನ ಸಭೆಗೆ ಸ್ಪಂದಿಸಿಲ್ಲ ಎಂದು ಟೀಕಿಸುವ ವ್ಯಕ್ತಿಗೆ ಪಕ್ಷ ಹಾಗೂ ಜಿಲ್ಲೆಯ ಇತಿಹಾಸ ಗೊತ್ತಿಲ್ಲ. ಅಹಿಂದ ವರ್ಗ, ಮೇಲ್ಜಾತಿ, ಕೆಳಜಾತಿ ಎಂದು ಜನರಲ್ಲಿ ಭಿನ್ನಾಭಿಪ್ರಾಯ ಮೂಡಿಸಿ, ಪಕ್ಷ ಒಡೆಯುವ ವಿನಯ್‌ ಕಾರ್ಯ ಖಂಡನೀಯ ಎಂದರು.

ನಾಯಕರನ್ನು ಟೀಕಿಸುವುದು ಮತ್ತು ಅಹಿಂದ ವರ್ಗದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ರಾಜಕೀಯ ನಾಯಕತ್ವದ ಬಗ್ಗೆ ತಿಳಿಯದ ಇವರು ಪಕ್ಷದ ಕಚೇರಿಗೆ ಕಾಲಿಟ್ಟಿಲ್ಲ, ಬಾವುಟ ಕಟ್ಟಿಲ್ಲ ಎಂದು ಟೀಕಿಸಿದರು.

ಟಿಕೆಟ್‌ ವಿಚಾರದಲ್ಲೂ ತಪ್ಪು ಮಾಡಿದ್ದಿರಿ. ಇಲ್ಲಿಗೆ ನಿಮ್ಮ ತಪ್ಪು ತಿದ್ದಿಕೊಳ್ಳಿ. ಇನ್ಮುಂದೆ ಜನರಿಗೆ ತಪ್ಪು ಮಾಹಿತಿ ಕೊಡುವ ಹೇಳಿಕೆ ನೀಡಿದರೆ, ಅದರ ಪರಿಣಾಮ ಎದುರಿಸುತ್ತೀರಿ ಎಂದು ಎಚ್ಚರಿಸಿದರು.

ಜಾತಿ ಎತ್ತಿ ಕಟ್ಟುವುದು, ಒಗ್ಗಟ್ಟು ಹಾಳು ಮಾಡುವುದು ಮತ್ತು ಸಮಾಜಕ್ಕೆ ಅವಮಾನಿಸುವ ಕಾರ್ಯವನ್ನು ವಿನಯ್‌ ಕುಮಾರ್‌ ಕೈ ಬಿಡಬೇಕು ಎಂದರು.

ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ. ಶೆಟ್ಟಿ, ಪಾಲಿಕೆ ಸದಸ್ಯ ಚಮನ್‌ ಸಾಬ್‌, ಎ. ನಾಗರಾಜ್‌, ದೂಡಾ ಸದಸ್ಯ ಎಂ. ಮಂಜುನಾಥ್‌, ಒಬಿಸಿ ರಾಜ್ಯ ಕಾರ್ಯದರ್ಶಿ ನಾಗರಾಜ್‌,  ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಮಂಗಳಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದ್ರಾಕ್ಷಾಯಣಿ, ರಾಜೇಶ್ವರಿ, ಚಂದ್ರು, ಶುಭ ಮಂಗಳಾ ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!