ಕನ್ನಡ ಭಾಷೆ ಉಳಿಸುವ ಜವಾಬ್ದಾರಿ ವಿದ್ಯಾರ್ಥಿಗಳಿಗಿದೆ

ಕನ್ನಡ ಭಾಷೆ ಉಳಿಸುವ ಜವಾಬ್ದಾರಿ ವಿದ್ಯಾರ್ಥಿಗಳಿಗಿದೆ

ಹರಪನಹಳ್ಳಿ : `ಕನ್ನಡ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಚ್. ಮಲ್ಲಿಕಾರ್ಜುನ  

ಹರಪನಹಳ್ಳಿ, ಆ.13- ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಕನ್ನಡ ಭಾಷೆ ಹೆಚ್ಚು ಶ್ರೀಮಂತವಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ವಿದ್ಯಾರ್ಥಿಗಳ ಮೇಲಿದೆ ಎಂದು ಎಸ್.ಯು.ಜೆ.ಎಂ ಕಾಲೇಜಿನ ಕನ್ನಡ ಉಪನ್ಯಾಸಕ ಎಚ್. ಮಲ್ಲಿಕಾರ್ಜುನ್‌ ಹೇಳಿದರು.

ನವಜ್ಯೋತಿ ಸಾಂಸ್ಕೃತಿಕ ಸಂಸ್ಥೆಯಿಂದ ಪಟ್ಟಣದ ಬಸಮ್ಮ ಕಲಾಮಂದಿರದಲ್ಲಿ ಇಂದು ಆಯೋಜಿಸಿದ್ದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ `ಕನ್ನಡ ರತ್ನ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕನ್ನಡ ಸಾಹಿತ್ಯದ ಮೇರು ಕೃತಿಗಳನ್ನು ಹೆಚ್ಚು ಓದಬೇಕು. ಕಾವ್ಯ, ಕಥೆ, ನಾಟಕ, ಕಾದಂಬರಿ, ಪ್ರವಾಸ ಕಥನ ಸೇರಿದಂತೆ ಎಲ್ಲಾ ಆಯಾಮಗಳ ಪುಸ್ತಕಗಳನ್ನು ನಿರಂತರವಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಳೆಗನ್ನಡ, ನವ್ಯ ಸಾಹಿತ್ಯ ಮಾತ್ರವಲ್ಲದೆ ಹೊಸ ತಲೆಮಾರಿನ ಕವಿ ಲೇಖಕರ ಕೃತಿಗಳನ್ನು ಅಭ್ಯಾಸ ಮಾಡಬೇಕು. ಆಗ ಮಾತ್ರ ಕವಿ ಹಾಗೂ ಲೇಖಕರಾಗಲು ಸಾಧ್ಯ ಎಂದು ಮಕ್ಕಳಿಗೆ ಹೇಳಿದರು.

ಹೂವಿನ ಹಡಗಲಿಯ ಸಿಂಚನ ಪ್ರಕಾಶನದ ಸುರೇಶ ಅಂಗಡಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳೇ ಹೆಚ್ಚು ಸಾಧನೆ ಮಾಡಿ ದ್ದಾರೆ ಎಂದ ಅವರು, ದುಡಿಮೆಯ ಒಂದು ಭಾಗವನ್ನು ಕನ್ನಡ ಕಟ್ಟುವ ಕಾರ್ಯಕ್ಕೆ ವಿನಿಯೋಗಿಸಿ, ಎಂದು ಮನವಿ ಮಾಡಿದರು.

ನವಜ್ಯೋತಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಸಪ್ನ ಮಲ್ಲಿಕಾರ್ಜುನ್‌ ಮಾತನಾಡಿ, ಸತತ ಅಧ್ಯಯನ ಹಾಗೂ ನಿರಂತರ ಪ್ರಯತ್ನದಿಂದ ಎಲ್ಲವೂ ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂದು ತಿಳಿಸಿದರು.

ರಾಜ್ಯದ 225 ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ `ಕನ್ನಡ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪತ್ರಕರ್ತ ಎಂ. ದಯಾನಂದ, ಕೆ. ಕರಿಬಸಪ್ಪ, ಸುರೇಶ್ ಅಂಗಡಿ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸಾಧಕ ವಿದ್ಯಾರ್ಥಿಗಳಿದ್ದರು.

error: Content is protected !!