ದಾವಣಗೆರೆ, ಆ. 12- ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ ಇವರ ವತಿಯಿಂದ 109 ಹವಾಮಾನ ವೈಪರೀತ್ಯಕ್ಕೆ ಸ್ಥಿತಿ ಸ್ಥಾಪಕತ್ವ ಉಳ್ಳ ಬೆಳೆ ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ಇವರ ಅಮೃತ ಹಸ್ತದಿಂದ ಬಿಡುಗಡೆಗೊ ಳಿಸಿದ ಸಂದರ್ಭದಲ್ಲಿ ನಗರದ ಐಸಿಎಆರ್ ತರಳ ಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶೇಷ ಕಾರ್ಯ ಕ್ರಮವನ್ನು ರೈತರಿಗೋಸ್ಕರ ಹಮ್ಮಿಕೊಳ್ಳಲಾಗಿತ್ತು.
ವಿಶೇಷ ಗುಣಗಳುಳ್ಳ 69 ಕೃಷಿ ಬೆಳೆಗಳು ಹಾಗೂ ನಲವತ್ತು ತೋಟಗಾರಿಕಾ ಬೆಳೆಗಳು ರೈತರ ಆದಾಯ, ಆರೋಗ್ಯ ಹಾಗೂ ಆನಂದಕ್ಕಾಗಿ ಬಿಡುಗಡೆಗೊಂಡವು.
ಪ್ರಸ್ತುತ ಬಿಡುಗಡೆಗೊಂಡಿರುವ ನೂತನ ತಳಿಗಳು ಗ್ರಾಮೀಣ ಕ್ಷೇತ್ರದಲ್ಲಿ ಇರುವ ಪೋಷಕಾಂಶಗಳ ಕೊರತೆಯನ್ನು ಕಡಿಮೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. 23 ದವಸ ಧಾನ್ಯಗಳು, 11 ಬೇಳೆ ಕಾಳುಗಳು, 7 ಎಣ್ಣೆ ಕಾಳುಗಳು, ಏಳು ಮೇವಿನ ಬೆಳೆಗಳು 4 ಕಬ್ಬಿನ ತಳಿಗಳು, 6 ರೇಷ್ಮೆ ತಳಿಗಳು, 11 ಹವಾಮಾನ ವೈಪರೀತ್ಯಕ್ಕೆ ಸ್ಥಿತಿಸ್ಥಾಪಕತ್ವವುಳ್ಳ ಬೆಳೆಗಳು, 8 ಹಣ್ಣುಗಳು, 8 ತರಕಾರಿಗಳು, ಮೂರು ಗೆಡ್ಡೆ ಗೆಣ ಸುಗಳು, 6 ಸಾಂಬಾರ ತಳಿಗಳು, 6 ಮರದ ಬೆಳೆ ತಳಿಗಳು, 5 ಹೂವಿನ ತಳಿಗಳು, 4 ಔಷಧೀಯ ಸಸ್ಯಗಳು, ಹೀಗೆ 109 ನೂತನ ಬೆಳೆ ತಳಿಗಳು ಕೃಷಿ ಕ್ಷೇತ್ರವನ್ನು ಅತ್ಯಂತ ವಿಶಿಷ್ಟವಾಗಿಸಲಿವೆ.
ಇವುಗಳಲ್ಲಿ 13 ತಳಿಗಳು ನಮ್ಮ ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಿಂದ ಅಭಿವೃದ್ಧಿ ಆಗಿರುತ್ತವೆ. ಅವುಗಳಲ್ಲಿ ಪ್ರಮುಖವಾಗಿ ಅರ್ಕ ಉದಯ್ ಎಂಬ ಮಾವಿನ ತಳಿ ಕ್ಯಾರೋಟಿನಾಯ್ಡ್ ಅಂಶ ಹೆಚ್ಚು ಉಳ್ಳದ್ದಾಗಿದೆ. ಇದು ಜುಲೈ ತಿಂಗಳಲ್ಲಿ ಮಾರುಕಟ್ಟೆಗೆ ಬರುವುದರಿಂದ ಒಳ್ಳೆಯ ಬೆಲೆ ಕೂಡ ಇದಕ್ಕೆ ಸಿಗುತ್ತದೆ. ಅರ್ಕ ಕಿರಣ್ ಎಂಬ ಪೇರಲೆ ಹಣ್ಣಿನ ಬೆಳೆ ಲೈಕೋಪಿನ್ ಅಂಶ ಅಧಿಕವಾಗಿ ಉಳ್ಳದ್ದಾಗಿ ಕೆಂಪು ವರ್ಣದಿಂದ ಕೂಡಿದ್ದು ಒಳ್ಳೆಯ ಮಾರುಕಟ್ಟೆ ಬೆಲೆ ಸಿಗಲಿದೆ.
ಅರ್ಕ ವೈಭವ್ ಎಂಬ ಟ್ಯೂಬರೋಸ್ ಎಂಬ ಹೂವಿನ ಬೆಳೆ ಎರಡು ದಳಗಳಿಂದ ಕೂಡಿದ್ದು ವಿಶೇಷವಾಗಿ ಮಾರುಕಟ್ಟೆಯಲ್ಲಿ ದೊರೆಯಲಿದೆ. ಅರ್ಕಾ ಶ್ರೀಯ ಎಂಬ ಸುಗಂಧರಾಜ ಹೂವಿನ ತಳಿ ಕಡು ಕಿತ್ತಳೆ ಬಣ್ಣದಿಂದ ಕೂಡಿದ್ದು ಹೆಚ್ಚಿನ ಬೆಲೆ ಪಡೆಯಲಿದೆ. ಅರ್ಕ ಅಮರ್ ಎಂಬ ಗ್ಲ್ಯಾಡಿಯೋಲಸ್ ಹೂವಿನ ತಳಿ ಹೆಚ್ಚು ಇಳುವರಿ ನೀಡಲಿದೆ ಅರ್ಕ ನಿಕಿತಾ ಎಂಬ ಹೈಬ್ರಿಡ್ ಬೆಂಡೆ ಬೆಳೆ ಅಯೋಡಿನ್ ಅಂಶ ಅಧಿಕ ಉಳ್ಳದ್ದಾಗಿದೆ ಹಾಗೂ ಹಳದಿ ಮುಜಾಯಿಕ್ ವೈರಸ್ಗೆ ನಿರೋಧಕ ಶಕ್ತಿ ಇರುತ್ತದೆ.
ಸಿರಿಗೆರೆ ಜಗದ್ಗುರುಗಳು ನಿರ್ಮಿಸಿರುವ ಕೃಷಿ ವಿಜ್ಞಾನ ಕೇಂದ್ರ ಜಿಲ್ಲೆಯ ರೈತರ ಆತ್ಮೀಯ ಒಡನಾಡಿ
ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಆಶಯದಂತೆ ಕೃಷಿ ವಿಜ್ಞಾನ ಕೇಂದ್ರವು ಕೇಂದ್ರ ಸರ್ಕಾರದ ಪ್ರತಿಷ್ಠಿತ ಹವಾಮಾನ ವೈಪರೀತ್ಯಕ್ಕೆ ಚೇತರಿಕೆಯುಕ್ತ ಕೃಷಿ ತಂತ್ರಜ್ಞಾನಗಳ ಯೋಜನೆಯನ್ನು ಹತ್ತು ವರ್ಷಗಳ ಕಾಲ ಸಿದ್ದನೂರು, ಪವಾಡ ರಂಗವ್ವನಹಳ್ಳಿ, ಅಗಸನಕಟ್ಟೆ ಗ್ರಾಮಗಳಲ್ಲಿ ಪರಿಣಾಮಕಾರಿ ಯಾಗಿ ಅನುಷ್ಠಾನಗೊಳಿಸಲಾಗಿತ್ತು.
ಈ ಗ್ರಾಮಗಳಿಂದ ಸುಮಾರು 500 ಕುಟುಂಬಗಳಿಗೆ ಹವಾಮಾನ ವೈಪರೀತ್ಯಕ್ಕೆ ಸ್ಥಿತಿಸ್ಥಾಪಕತೆ ಉಳ್ಳ ಬೆಳೆ ತಳಿಗಳ ಪರಿಚಯವನ್ನು ಮಾಡಿಕೊಡಲಾಗಿತ್ತು. ಇದರಿಂದಾಗಿ ಈ ರೈತರುಗಳ ಕೃಷಿ ಪರಿಸ್ಥಿತಿ ಉತ್ತಮ ಗೊಂಡಿತ್ತು. ಜೊತೆಗೆ ಪರಮಪೂಜ್ಯರ ನದಿ ನೀರನ್ನು ಕೆರೆಗಳಿಗೆ ಜೋಡಿಸುವ ಮಹತ್ವಾಕಾಂಕ್ಷಿ ಯೋಜನೆಯ ಮೂಲಕ ನೀರಾವರಿ ಸೌಲಭ್ಯವು ಪರಿಣಾಮಕಾರಿಯಾಗಿ ಹೆಚ್ಚಾಗಿದ್ದುದರಿಂದ ಕೃಷಿ ಚಟುವಟಿಕೆಗಳು ತ್ವರಿತಗತಿಯಲ್ಲಿ ಅಭಿವೃದ್ಧಿಗೊಂಡವು.
ಶ್ರೀಗಳ ಮೂಲ ಆಶಯ ಗ್ರಾಮೀಣ ಅಭಿವೃದ್ಧಿ ಹಾಗೂ ಕೃಷಿಕರ ಆದಾಯ ಆರೋಗ್ಯ ಉತ್ತಮ ಪಡಿಸುವುದು ಅವರ ಎಲ್ಲ ಯೋಜನೆಗಳಲ್ಲಿ ನಿಚ್ಚಳವಾಗಿ ಕಂಡುಬರುತ್ತದೆ. ಅವರ ಕನಸಿನ ಕೂಸಾದ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆಯ ಕೃಷಿಕರ ಅಭ್ಯುದಯಕ್ಕೆ ಕಟಿಬದ್ಧವಾಗಿದೆ. ಲಕ್ಷಾಂತರ ರೈತ ಕುಟುಂಬಗಳ ಅಭಿವೃದ್ಧಿಗೆ ಪರಮಪೂಜ್ಯರ ಕೃಷಿ ವಿಜ್ಞಾನ ಕೇಂದ್ರವು ನಿರಂತರವಾಗಿ ಕಳೆದ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿದೆ. ಈ ರೀತಿ ವಿನೂತನ ಕೃಷಿ ತಂತ್ರಜ್ಞಾನಗಳನ್ನು ನಿರಂತರವಾಗಿ ರೈತರಿಗೆ ಪರಿಚಯಿಸುತ್ತಾ ಮಾರ್ಗದರ್ಶನ ನೀಡುತ್ತಾ ಕೃಷಿ ಕ್ಷೇತ್ರವನ್ನು ಸದೃಢಗೊಳಿಸುವಲ್ಲಿ ಶ್ರೀಗಳು ನಿರ್ಮಿಸಿರುವ ಕೃಷಿ ವಿಜ್ಞಾನ ಕೇಂದ್ರ ಜಿಲ್ಲೆಯ ರೈತರ ಆತ್ಮೀಯ ಒಡನಾಡಿ ಆಗಿದೆ.
– ಡಾ. ದೇವರಾಜ ಟಿ .ಎನ್. ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು, ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ
ಅರ್ಕ ವಿಸ್ತಾರ ಎಂಬ ಡಾಲಿಕೋಸ್ ಅವರೆ ಬೆಳೆ ಹೆಚ್ಚು ಇಳುವರಿ ನೀಡಲಿದೆ. ಅರ್ಕ ಧನ್ವಂತರಿ ಹಾಗೂ ಅರ್ಕ ದಕ್ಷ ಎಂಬ ಹಸಿರೆಲೆ ಗೊಬ್ಬರದ ಬೆಳೆಗಳು ಔಷಧೀಯ ಗುಣಗಳಿಂದ ಕೂಡಿದ್ದು ಎಲ್ ಡೋಪ ಎಂಬ ಅಂಶವು ಅಧಿಕವಾಗಿರುತ್ತದೆ. ಅರ್ಕ ಅಶ್ವಗಂಧ ಹಾಗೂ ಅರ್ಕ ಪ್ರಭಾವಿ ಔಷಧೀಯ ತಳಿಗಳು ರೋಗನಿರೋಧಕ ಶಕ್ತಿಯನ್ನು ನಮ್ಮಲ್ಲಿ ಹೆಚ್ಚು ಮಾಡಲಿವೆ.
ಹೀಗೆ ವೈವಿಧ್ಯಮಯ ಶಕ್ತಿ ಸಾಮರ್ಥ್ಯಗಳುಳ್ಳ ನವೀನ ಬೆಳೆ ತಳಿಗಳು ಕೃಷಿ ಕ್ಷೇತ್ರವನ್ನು ಆವರಿಸಿದ್ದು ಇವುಗಳ ಪ್ರಾತ್ಯಕ್ಷಿಕೆಯನ್ನು ತರಳಬಾಳು ಜಗದ್ಗುರುಗಳ ಮಾರ್ಗದರ್ಶನ ಹಾಗೂ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಇವರ ತಾಂತ್ರಿಕ ಸಹಯೋಗದಲ್ಲಿ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆಯ ಕ್ಷೇತ್ರಗಳಲ್ಲಿ ಸದ್ಯದಲ್ಲೇ ಕೈಗೊಳ್ಳಲಾಗುವುದು.
ಮಳೆಯಾಶ್ರಿತ ಪ್ರದೇಶಗಳಿಗೆ ಸೂಕ್ತವಾಗಿರುವ ಒಣ ಕೂರಿಗೆ ಭತ್ತ ಪದ್ಧತಿಯನ್ನು ಈಗಾಗಲೇ ಶ್ರೀ ತರಳಬಾಳು ಸ್ವಾಮೀಜಿಯವರು ಪ್ರಾತ್ಯಕ್ಷಿಕೆ ಮಾಡಿ ತೋರಿಸಿದ್ದಾರೆ. ಹೆಚ್ಚಿನ ಸಂಶೋಧನೆಯನ್ನು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಜೈನ್ ಇರಿಗೇಶನ್ ಸಂಸ್ಥೆಯ ಸಹಯೋಗದೊಂದಿಗೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರು ವಿಜ್ಞಾನಿ ಗಳು, ನಾಗರಿಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.