ಸಾಣೇಹಳ್ಳಿ, ಆ.12- ದಾವಣಗೆರೆ ಬಸವ ಬಳಗದ ಶ್ರೀ ಸಿದ್ದರಾಮ ಶರಣರ ನಿಧನಕ್ಕೆ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಂಬನಿ ಮಿಡಿದಿದ್ದಾರೆ.
ಶ್ರೀ ಸಿದ್ಧರಾಮ ಶರಣರು ಬಸವ ಕಲ್ಯಾಣವನ್ನೇ ತಮ್ಮ ಕೇಂದ್ರವಾಗಿಸಿಕೊಂಡು ಕಲ್ಯಾಣ ನಾಡಿನಲ್ಲಿ ಬಸವ ತತ್ವದ ಪ್ರಚಾರಕ್ಕೆ ಟೊಂಕ ಕಟ್ಟಿ ನಿಂತವರು. ಆಳವಾದ ಅದ್ಯಯನವಿತ್ತು. ಶರಣರಿಗೆ ಸಂಬಂಧಿಸಿದಂತೆ ಹಲವಾರು ಪದ್ಯಗಳನ್ನು, ಪುಟ್ಟ ಪುಟ್ಟ ನಾಟಕಗಳನ್ನು ರಚಿಸಿದ್ದರು.
ಅವರದು ಕಂಚಿನ ಕಂಠ. ಮಾತು, ಗಾಯನ ಎರಡರಲ್ಲೂ ಪ್ರವೀಣರು. ಇಷ್ಟಲಿಂಗ ನಿಷ್ಟರು. ಅಪ್ಪ ಬಸವಣ್ಣ ಎನ್ನದೇ ಅವರು ಬಾಯಿ ತೆರೆಯುತ್ತಿರಲಿಲ್ಲ. ಶರಣರ ವಿಚಾರಗಳನ್ನು ಅಸ್ಖಲಿತವಾಗಿ ಎಲ್ಲರ ಮನಮುಟ್ಟುವಂತೆ ತಿಳಿಸುತ್ತಿದ್ದರು.
ಬಿಳಿಯ ವಸ್ತ್ರಧಾರಿಗಳಾಗಿದ್ದ ಅವರ ಹಣೆಯ ಮೇಲೆ ಯಾವಾಗಲೂ ಮೂರು ಬೆಟ್ಟು ವಿಭೂತಿ ರಾರಾಜಿಸುತ್ತಿತ್ತು. ಬಸವ ತತ್ವ ಹೇಳುವ ವರನ್ನು ಮತ್ತು ಅದರಂತೆ ನಡೆಯುವವರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು.
ಭಾಲ್ಕಿ ಚನ್ನಬಸವ ಪಟ್ಟದ್ದೇವರ ಪರಮ ಶಿಷ್ಯರಾಗಿ ಕಲ್ಯಾಣದ ಅನುಭವ ಮಂಟಪದ ಜವಾಬ್ದಾರಿಯನ್ನು ಸಹ ಹೊತ್ತಿದ್ದರು. ಅವರನ್ನು 30 ವರ್ಷಗಳಿಂದಲೂ ಬಲ್ಲೆವು. ನಮ್ಮ ಬಗ್ಗೆ ಅಪಾರ ಭಕ್ತಿ, ಪ್ರೀತಿ, ಗೌರವ ಹೊಂದಿದ್ದರು. ಇಳಿವಯಸ್ಸಿನಲ್ಲಿ ಕಲ್ಯಾಣ ಬಿಟ್ಟು ದಾವಣಗೆರೆಯಲ್ಲಿ ತಮ್ಮ ಕಾಯಕ ಮುಂದುವರಿಸಿದ್ದರು. ಬಸವ ತತ್ವದ ಒಬ್ಬ ಸೇನಾನಿಯನ್ನು ಕಳೆದುಕೊಂಡಂತಾಗಿದೆ. ಗೃಹಸ್ಥರಾಗಿದ್ದ ಅವರು ಶರಣ ತತ್ವಕ್ಕೆ ತಮ್ಮನ್ನು ಅರ್ಪಿಸಿಕೊಂಡ ನಂತರ ಶುದ್ಧ ಸಾಧುಗಳೇ ಆಗಿದ್ದರು. ಅಂಥವರ ಸಂತತಿ ಮತ್ತೆ ಉದಯಿಸಲಿ ಎಂದು ಪಂಡಿತಾರಾಧ್ಯ ಶ್ರೀಗಳು ಆಶಿಸಿದ್ದಾರೆ.