ಹರಿಹರ, ಅ. 9- ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಇಲ್ಲಿನ ಪೊಲೀಸರು 10 ಲಕ್ಷ ರೂ. ಅಂದಾಜು ಮೌಲ್ಯದ 10 ಕೆ.ಜಿ ಗಾಂಜಾ ಮತ್ತು ಒಂದು ಬೈಕ್ ವಶಪಡಿಸಿಕೊಂಡಿದ್ದಾರೆ.
ನಗರ ಪೊಲೀಸ್ ಠಾಣೆಯಲ್ಲಿ ಕರೆದಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಂತರ ಡಿವೈಎಸ್ಪಿ ಜಿ.ಎಸ್. ಬಸವರಾಜ್ ಈ ವಿಷಯ ತಿಳಿಸಿದರು.
ಗಸ್ತಿನಲ್ಲಿದ್ದ ನಗರ ಠಾಣೆಯ ಪಿಎಸ್ಐ ಶ್ರೀಪತಿ ಗಿನ್ನಿ ನೇತೃತ್ವದ ತಂಡವು ಹಂಸಾಗರ ಕಾಂಪೌಂಡ್ ಹತ್ತಿರದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರು ಗಾಂಜಾವನ್ನು ಮಾರಾಟ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಂತರರಾಜ್ಯ ಮತ್ತು ಓರ್ವ ಸ್ಥಳೀಯ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಇನ್ಸ್‌ಪೆಕ್ಟರ್ ವಿಜಯಕುಮಾರ್, ಪಿಎಸ್ಐ ಶ್ರೀಪತಿ ಗಿನ್ನಿ, ಪೊಲೀಸ್ ಸಿಬ್ಬಂದಿ ನಾಗರಾಜ್ ಸುಣಗಾರ್, ಸತೀಶ್, ನಿಂಗರಾಜ್, ಸಿದ್ದೇಶ್, ಸಿದ್ದರಾಜ್, ರುದ್ರಸ್ವಾಮಿ, ರವಿನಾಯ್ಕ್, ರವಿಕುಮಾರ್ ಇತರರು ಹಾಜರಿದ್ದರು.