ನೀರಿನ ಕೊರತೆ ನೀಗಿಸಲು ಹಸಿ ಮತ್ತು ಒಣಗಿಸುವ ಪದ್ಧತಿ ಸೂಕ್ತ

ನೀರಿನ ಕೊರತೆ ನೀಗಿಸಲು ಹಸಿ ಮತ್ತು ಒಣಗಿಸುವ ಪದ್ಧತಿ ಸೂಕ್ತ

ಯಾಂತ್ರೀಕೃತ ಭತ್ತದ ನಾಟಿ ಮಾಡುವುದರಿಂದ ಕೂಲಿ ಉಳಿತಾಯದ ಜತೆಗೆ ಭತ್ತದ ಇಳುವರಿ ಹೆಚ್ಚಾಗಲಿದೆ.

– ಶ್ರೀಧರ್‌ ಮೂರ್ತಿ, ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ

ಬೇಸಾಯ ತಜ್ಞ ಮಲ್ಲಿಕಾರ್ಜುನ್‌

ದಾವಣಗೆರೆ, ಆ.7- ಭತ್ತದ ಬೆಳೆಯಲ್ಲಿ ನೀರಿನ ಬಳಕೆ ಉಳಿತಾಯ ಮಾಡಲು ಪರ್ಯಾಯವಾದ ಹಸಿ ಮತ್ತು ಒಣಗಿಸುವ ಪದ್ಧತಿ ಅಳವಡಿಸಿಕೊಳ್ಳಬಹುದು ಎಂದು ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ್‌  ರೈತರಿಗೆ ತಿಳಿಸಿದರು.

ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ನಗರದ ಹೊರವಲಯದಲ್ಲಿನ ಹಳೇಬಾತಿ ಗ್ರಾಮದಲ್ಲಿ ಭತ್ತದ ಬೆಳೆಗೆ ಪರ್ಯಾಯ ಹಸಿ ಮಾಡುವಿಕೆ ಮತ್ತು ಒಣಗಿಸುವಿಕೆ ಪದ್ಧತಿಯ ಮುಂಚೂಣಿ ಪ್ರಾತ್ಯಕ್ಷಿಕೆ ತೋರಿಸಿ ಮಾತನಾಡಿದರು.

1 ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲು ಸುಮಾರು 1100 ಎಂಎಂ ಪ್ರಮಾಣದ ನೀರು ಬೇಕಾಗಲಿದೆ.  ಆದರೆ ನೀರಿನ ಉಳಿತಾಯ ಮಾಡುವ ಪರ್ಯಾಯ ಹಸಿ ಮತ್ತು ಒಣಗಿಸುವ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಶೇ.30ರಷ್ಟು ನೀರನ್ನು ಉಳಿತಾಯ ಮಾಡಬಹುದು ಎಂದು ಹೇಳಿದರು.

ಸರಳ ಮತ್ತು ಸುಲಭವಾದ 30 ಸೆಂ.ಮೀ ಉದ್ದದ ಪಿವಿಸಿ ಪೈಪ್‌ ತೆಗೆದುಕೊಂಡು ಮೇಲಿನ 10 ಸೆಂ.ಮೀ ಬಿಟ್ಟು, 20 ಸೆಂ.ಮೀ ಸುತ್ತಲೂ ಚಿಕ್ಕ-ಚಿಕ್ಕ ರಂಧ್ರಗಳನ್ನು ಮಾಡಬೇಕು. ನಂತರ ಪೈಪನ್ನು ಭೂಮಿ ಒಳಗೆ ಹಾಕಬೇಕು ಎಂದರು. ಭೂಮಿಯ ಮೇಲ್ಭಾಗದಲ್ಲಿ 10 ಸೆಂ.ಮೀ ಪೈಪ್ ಕಾಣಬೇಕು. ಪೈಪಿನ ನೀರಿನ ಮಟ್ಟ 15 ಸೆಂ.ಮೀ ಗಿಂತ ಕಡಿಮೆಯಾದಲ್ಲಿ ಭತ್ತಕ್ಕೆ ನೀರನ್ನು ಕೊಡಬೇಕು ಎಂದು ಮಾಹಿತಿ ನೀಡಿದರು. ಗದ್ದೆಯಲ್ಲಿ ನಿರಂತರ ವಾಗಿ ನೀರು ನಿಲ್ಲುವುದರಿಂದ ಮೀಥೇನ್ ಉತ್ಪತ್ತಿ ಆಗುವುದನ್ನು ಈ ಪದ್ಧತಿಯಿಂದ ತಡೆಯಬಹುದು ಎಂದು ವಿವರಿಸಿದರು.

ಭತ್ತವು ಪ್ರಮುಖ ಆಹಾರ ಬೆಳೆಯಾಗಿದೆ. ಈ ಬೆಳೆಯ ಉತ್ಪಾದನೆ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಅನೇಕ ಪದ್ದತಿಗಳನ್ನು ಭತ್ತದ ಬೆಳೆಯಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಕೇಂದ್ರದ ಮುಖ್ಯಸ್ಥ ಡಾ. ದೇವರಾಜ್ ತಿಳಿಸಿದರು.

ಈ ವೇಳೆ ಪ್ರಗತಿಪರ ರೈತರಾದ ಮಲ್ಲಿಕಾರ್ಜುನಪ್ಪ, ಶಂಕರ್, ನಾಗರಾಜ್ ಮತ್ತು ಗ್ರಾಮಸ್ಥರು ಇದ್ದರು.

error: Content is protected !!