ಸಪ್ನ ಮಲ್ಲಿಕಾರ್ಜುನ್
ಹರಪನಹಳ್ಳಿ, ಆ.7- ಯಂತ್ರೋಪಕರಣಗಳಿಂದಾಗಿ ನೇಕಾರರ ಬದುಕು ದುಸ್ಥರವಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ತಾಲ್ಲೂಕು ಅಧ್ಯಕ್ಷೆ ಸಪ್ನಾ ಮಲ್ಲಿಕಾರ್ಜುನ್ ಹೇಳಿದರು.
ಪಟ್ಟಣದ ಬಸಮ್ಮ ಕಲಾಮಂದಿರದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೈಮಗ್ಗವು ಉದ್ಯೋಗದ ಅತೀ ದೊಡ್ಡ ಕ್ಷೇತ್ರಗಳಲ್ಲಿ ಒಂದಾಗಿದೆ. ಗ್ರಾಮೀಣ ಆರ್ಥಿಕತೆಯಲ್ಲಿ ಹೆಚ್ಚು ಮಹತ್ವದ್ದಾಗಿದೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿಕೊಡುತ್ತದೆ ಮತ್ತು ಆರ್ಥಿಕ ಸಬಲೀಕರಣಗೊಳಿಸುತ್ತದೆ ಎಂದರು.
1905ರಲ್ಲಿ ಪ್ರಾರಂಭವಾದ ಸ್ವದೇಶಿ ಚಳುವಳಿಯಿಂದ ಕೈಮಗ್ಗ ಹುಟ್ಟಿಕೊಂಡಿದ್ದು, ಇದು ದೇಶಿಯ ಉದ್ಯಮವನ್ನು ಪುನಃ ಸ್ಥಾಪಿಸಲು ಮತ್ತು ಬ್ರಿಟಿಷ್ ಸರಕುಗಳ ಆಮದು ಕಡಿಮೆ ಮಾಡುವ ಪ್ರಯತ್ನವಾಗಿದ್ದರಿಂದ ಸ್ಥಳೀಯ ಆರ್ಥಿಕತೆ ಹೆಚ್ಚಿಸಲು ಸಹಾಯ ಮಾಡಿತು ಎಂದು ಹೇಳಿದರು. 2015ರಲ್ಲಿ ಆಗಸ್ಟ್ 7ನ್ನು ರಾಷ್ಟ್ರೀಯ ಕೈಮಗ್ಗ ದಿನವೆಂದು ಘೋಷಿ ಸಲಾಯಿತು. ಎಲ್ಲರೂ ಭಾರತದ ಸಾಂಪ್ರದಾಯಿಕ ಕೈಮಗ್ಗ ಉತ್ಪನ್ನ ಖರೀದಿಸಿ ಬಳಸುವ ಮೂಲಕ ನೇಕಾರರಿಗೆ ಆರ್ಥಿಕ ಬಲ ತುಂಬ ಬೇಕಾಗಿದೆ ಎಂದರು.
ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಮತ್ತು ಸದಸ್ಯರು ಕೈಮಗ್ಗ ಉತ್ಪನ್ನಗಳನ್ನು ಧರಿಸಿ ಖಾದಿ ಗ್ರಾಮೋದ್ಯೋಗ ಭಂಡಾರಕ್ಕೆ ಭೇಟಿ ನೀಡಿ ಕೈಮಗ್ಗದ ವಿವಿಧ ವಸ್ತುಗಳನ್ನು ಖರೀದಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಮಂಜುಳಾ ನಾಗರಾಜ್, ಉಪಾಧ್ಯಕ್ಷೆ ಉಮಾದೇವಿ, ಜಾನಕಮ್ಮ, ಕಲ್ಪನಾ, ಖಜಾಂಚಿ ಕೆ.ಎಂ. ಕೊಟ್ರಮ್ಮ, ಪದ್ಮಾವತಿ, ಶೀಲಾ, ರೇಣುಕಮ್ಮ, ಮಂಜುಳಾ ಮಡಿವಾಳರ ಇದ್ದರು.