ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶ್ರೀಗಳ ಆಶೀರ್ವಚನ
ಸಾಣೇಹಳ್ಳಿ, ಆ.6- ಅಂತರಂಗದ ಚೈತನ್ಯವೇ ಇಷ್ಟಲಿಂಗ ಪೂಜೆ. ಈ ಪೂಜೆ ಮಾಡಲು ಪೂಜಾರಿ, ಪುರೋಹಿತರ ಅವಶ್ಯವಿಲ್ಲ ಎಂದು ಪಂಡಿತಾರಾಧ್ಯ ಶ್ರೀಗಳು ಹೇಳಿದರು.
ಇಲ್ಲಿನ ಗುರುಬಸವ ಮಹಾಮನೆಯಲ್ಲಿ ಏರ್ಪಡಿಸಿದ್ದ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪೂಜಾರಿ ಮತ್ತು ಪುರೋಹಿತರ ಶೋಷಣೆಯಿಂದ ಮುಕ್ತರಾಗಲು ಇಷ್ಟಲಿಂಗ ಪೂಜೆಯಿಂದ ಸಾಧ್ಯ. ದೇವರ ಹೆಸರಿನಲ್ಲಿ ಅಜ್ಞಾನಿ, ಮೂಢರಾದವರು ಅದರಿಂದ ಹೊರಬರಲು ಇಚ್ಛಿಸುವವರಿಗೆ ಇಷ್ಟಲಿಂಗ ದೀಕ್ಷೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಇಷ್ಟಲಿಂಗ ಧರಿಸಿದವರು ಬೇರೆ ದೇವರುಗಳ ಗೊಡವೆಗೆ ಹೋಗಬಾರದು, ಜಾತಿ ಭೇದ ಮಾಡದೇ ಎಲ್ಲರೂ ಶಿವನ ಮಕ್ಕಳೆಂದು ಭಾವಿಸಬೇಕು ಮತ್ತು ಸೋಮಾರಿಗಳಾಗದೇ ಕೆಲಸ, ಕಾರ್ಯಗಳನ್ನು ಶ್ರದ್ಧೆ, ಪ್ರಾಮಾಣಿಕತೆಯಿಂದ ಮಾಡಬೇಕು ಎಂದರು.
ವ್ಯಕ್ತಿಯ ಸರ್ವಾಂಗೀಣ ಉನ್ನತಿಗೆ ಅಷ್ಟಾವರಣಗಳು ಸಹಕಾರಿಯಾಗಲಿವೆ. ಗುರುವಿಗೆ ವಿಶೇಷವಾದ ಸ್ಥಾನ ಮಾನ ಲಿಂಗಾಯತ ಧರ್ಮದಲ್ಲಿದೆ. ಯಾರು ಸರಿಯಾದ ಅರಿವು ಪಡೆದು, ಆಚಾರಕ್ಕೆ ತಂದು ಅನುಷ್ಠಾನ ಮಾಡಿಕೊಳ್ಳುವರೋ ಅವರು ಮಾತ್ರ ಗುರುವಾಗಲು ಸಾಧ್ಯ ಎಂದರು.
ಧರ್ಮ, ದೇವರುಗಳು ಭಯದ ಮೂಲವಾಗಿದ್ದ ಆ ಕಾಲದಲ್ಲಿ ಬಸವಣ್ಣನವರು ದೇವರು, ಧರ್ಮವು ಭಯದ ಮೂಲವಲ್ಲ, ದಯೆಯ ಮೂಲ ಎಂದಿದ್ದಾರೆ. ಆದ್ದರಿಂದ `ದಯೆಯಿಲ್ಲದೆ ಧರ್ಮವಿಲ್ಲ ಎಂಬುದನ್ನು ತಿಳಿಯಬೇಕು ಎಂದು ಹೇಳಿದರು.
ಏಕ ದೇವನಿಷ್ಠೆಗೆ 12ನೇ ಶತಮಾನದ ಎಲ್ಲ ಶರಣರು ಒತ್ತು ಕೊಟ್ಟರು. ಶರಣರು ಅನುಭವ ಮಂಟಪದ ಸಂಪರ್ಕಕ್ಕೆ ಬಂದ ಮೇಲೆ ಸ್ಥಾವರ ದೇವರುಗಳನ್ನು ನಿರಾಕರಿಸಿ, ಇಷ್ಟಲಿಂಗ ಕಟ್ಟಿಕೊಂಡು ಇಷ್ಟಲಿಂಗ ನಿಷ್ಠೆ ಬೆಳೆಸಿಕೊಂಡರು ಎಂದರು.
ಈ ವೇಳೆ ಸಂಗೀತ ಶಿಕ್ಷಕ ಎಚ್.ಎಸ್. ನಾಗರಾಜ್, ವಚನಗಳನ್ನು ಹೇಳಿಕೊಟ್ಟರು. ಸಿರಿಮಠ ಹಾಗೂ ಕರ್ಣ ಪೂಜೆಯ ವ್ಯವಸ್ಥೆಯನ್ನು ಮಾಡಿದರು. ಮುಖ್ಯಶಿಕ್ಷಕ ಬಿ.ಎಸ್. ಶಿವಕುಮಾರ್ ಇದ್ದರು. ಸಾಣೇಹಳ್ಳಿಯ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಇಷ್ಟಲಿಂಗ ದೀಕ್ಷೆ ಪಡೆದುಕೊಂಡರು.