ನವಜಾತ ಶಿಶುವಿನ ಆರೋಗ್ಯಕರ ಬೆಳವಣಿಗೆಯಲ್ಲಿ ಸ್ತನ್ಯಪಾನ ಮಹತ್ವದ ಪಾತ್ರ

ನವಜಾತ ಶಿಶುವಿನ ಆರೋಗ್ಯಕರ ಬೆಳವಣಿಗೆಯಲ್ಲಿ ಸ್ತನ್ಯಪಾನ ಮಹತ್ವದ ಪಾತ್ರ

ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ  ಡಾ. ಜಿ.ಎಸ್. ಲತಾ

ದಾವಣಗೆರೆ, ಆ.6-  ಸ್ತನ್ಯಪಾನವು ನವಜಾತ ಶಿಶುವಿನ ಆರೋಗ್ಯಕರವಾದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆಗಸ್ಟ್‌ 1 ರಿಂದ 7 ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಸ್ತನ್ಯಪಾನ ಸಪ್ತಾಹವನ್ನು ಜಾಗತಿಕವಾಗಿ ಆಚರಿಸಲಾಗುತ್ತಿದ್ದು, ಈ ಸಪ್ತಾಹ ತಾಯಂದಿರು ತಮ್ಮ ಶಿಶುಗಳಿಗೆ ಸ್ತನ್ಯಪಾನ ಮಾಡಿಸಲು ಪ್ರೇರೇಪಿಸುವುದು. ತಾಯಿ ಹಾಲಿನ ಮಹತ್ವವನ್ನು ತಿಳಿಸುವುದು ಹಾಗೂ ಸ್ತನ್ಯಪಾನ ಕುರಿತಾದ ಜಾಗೃತಿ ಮೂಡಿಸುವುದ ಮುಖ್ಯ ಉದ್ದೇಶವಾಗಿದೆ ಎಂದು ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಮಕ್ಕಳ ವಿಭಾಗದ ಪ್ರಾಧ್ಯಾಪಕರಾದ ಡಾ. ಜಿ.ಎಸ್. ಲತಾ ಹೇಳಿದರು.

ನಗರದ ಬಾಪೂಜಿ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ  ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ  `ಸ್ತನ್ಯಪಾನದ ಅಂತರವನ್ನು ಕಡಿಮೆಗೊಳಿಸಿ, ಎದೆ ಹಾಲುಣಿಸಲು ತಾಯಂದಿರನ್ನು ಪ್ರೋತ್ಸಾಹಿಸಿ’  ಎಂಬ ವಿಷಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಎದೆಹಾಲು ಮಗುವಿಗೆ ಸಂಪೂರ್ಣ ಆಹಾರ ಹಾಗೂ ಅತ್ಯುತ್ತಮ ಪೋಷಕಾಂಶಗಳನ್ನು ಒದಗಿಸುತ್ತಿದೆ. 

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣವನ್ನು ಎದೆ ಹಾಲು ಹೊಂದಿರುವುದರಿಂದ ಮಕ್ಕಳ ಅತಿಸಾರ, ಶೀತ, ಕಫ ಮತ್ತು ಬ್ಯಾಕ್ಟೀರಿಯಾ, ವೈರಸ್ ದಾಳಿಯಿಂದ ಕಾಪಾಡುತ್ತದೆ. ಇತರೆ ಸಾಂಕ್ರಾಮಿಕ ರೋಗಗಳಿಂದ ಕೂಡಾ ರಕ್ಷಣೆ ಸಿಗುಲಿದ್ದು, ಮುಂದೆ ಶುಗರ್, ಬಿ.ಪಿ. ಕಾಯಿಲೆಗಳು ಕಡಿಮೆ ಪ್ರಮಾಣದಲ್ಲಿ ಕಂಡು ಬರುವುದು ಎಂದು ಡಾ. ಲತಾ ತಿಳಿಸಿದರು.

ಮಗುವಿನ ಮೆದುಳಿನ ಬೆಳವಣಿಗೆ, ಚುರುಕುತನ, ಐಕ್ಯೂ ಹೆಚ್ಚಾಗುವಂತೆ ಮಾಡುವ ಶಕ್ತಿ ಹೊಂದಿರುವ ಸ್ತನ್ಯಪಾನ ತಾಯಿಯ ಆರೋಗ್ಯಕ್ಕೂ ಸಹ ಬಹಳ ಮುಖ್ಯವಾಗಿದ್ದು, ಹೆರಿಗೆಯ ನಂತರ ತೂಕ ಕಡಿಮೆ ಮಾಡಲು ಸಹಾಯಕವಾಗುತ್ತದೆ. ತಾಯಿ-ಮಗುವಿನ ಬಾಂಧವ್ಯ ಬೆಳೆಯಲು ಅನುಕೂಲವಾಗುತ್ತದೆ. ಸ್ತನ್ಯಾಪಾನ ಮಾಡಿಸುವ ತಾಯಂದಿರಲ್ಲಿ ಸ್ತನ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್‌ಗಳಂತಹ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಕಡಿಮೆ ಮಾಡುತ್ತದೆ ಎಂದು ಡಾ. ಲತಾ ವಿವರಿಸಿದರು.

ವಿಶ್ವ ಸ್ತನ್ಯಪಾನ ಸಪ್ತಾಹದ ಆಚರಣೆ ನಮ್ಮ ಸಮಾಜದಲ್ಲಿ ಸ್ತನ್ಯಪಾನದ ಮಹತ್ವವನ್ನು ಕುರಿತು ಹೆಚ್ಚಿನ ಜಾಗೃತಿಯನ್ನು ಮೂಡಿಸಲು ಮತ್ತು ತಾಯಿಂದಿರಿಗೆ ಅಗತ್ಯವಾದ ಬೆಂಬಲವನ್ನು ಒದಗಿಸಲು ಸಹಾಯವಾಗುತ್ತದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ನಿರ್ದೇಶಕರಾದ ಡಾ. ಗುರುಪ್ರಸಾದ್, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಹಿರಿಯ ಮಕ್ಕಳ ತಜ್ಞರಾದ ಡಾ. ಸುರೇಶ್ ಬಾಬು,
ಡಾ. ಕೌಜಲಗಿ, ಡಾ. ಮೃತ್ಯುಂಜಯ,
ಡಾ. ಮೂಗನಗೌಡ ಉಪಸ್ಥಿತರಿದ್ದರು.

error: Content is protected !!