ಕಡ್ಲೇಬಾಳು ಗ್ರಾಮದಲ್ಲಿ ಭತ್ತದ ನಾಟಿ ಯಂತ್ರಕ್ಕೆ ಚಾಲನೆ ನೀಡಿದ ಜಿಪಂ ಸಿಇಒ ಸುರೇಶ ಬಿ. ಹಿಟ್ನಾಳ್
ದಾವಣಗೆರೆ, ಆ. 5 – ಇತ್ತೀಚಿನ ದಿನಗಳಲ್ಲಿ ಕೌಶಲ್ಯ ಪೂರಕ ಕೃಷಿ ಅನುಷ್ಠಾನ ಮಾಡುವ ಕಾರ್ಮಿಕರ ಹಾಗೂ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಗಾಗಿ ನಾಟಿ ಯಂತ್ರವು ರೈತರಿಗೆ ಉಪಯೋಗವಾಗುವಂತಿದ್ದು ಪ್ರತಿಯೊಬ್ಬ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುರೇಶ ಬಿ. ಇಟ್ನಾಳ್ ಕರೆಕೊಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲ್ಲೂಕಿನ ಹೊಸ ಕಡ್ಲೆಬಾಳು ಗ್ರಾಮದ ರಾಮಕೃಷ್ಣರವರ ಭತ್ತದ ಗದ್ದೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಯಾಂತ್ರೀಕೃತ ಭತ್ತ ನಾಟಿ ಚಾಲನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೇವಲ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದ ಕಾರ್ಯವಷ್ಟೇ ಅಲ್ಲದೆ ಸಾಮಾಜಿಕ ಅಭಿವೃದ್ಧಿಗೆ ಪೂರಕವಾದ ಹಲವಾರು ಕೆಲಸ ಕಾರ್ಯಗಳನ್ನು ನಡೆಸುತ್ತಿದೆ ಎಂದರು.
ಸಂಸ್ಥೆಯ ಕೃಷಿ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೆಜೆಸ್ ಮಾತನಾಡಿ, `ಯಂತ್ರಶ್ರೀ’ ಕಾರ್ಯಕ್ರಮವು ರೈತರಿಗೆ ಸುಲಭವಾಗಿ ಯಾವುದೇ ಕೂಲಿ ಆಳಿನ ಅವಶ್ಯಕತೆ ಇಲ್ಲದೆ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿಯನ್ನು ನಿರೀಕ್ಷಿಸು ವಂತಹ ವ್ಯವಸ್ಥೆ ಆಗಿದ್ದು, ಕೂಲಿ ಆಳುಗಳ ಸಮಸ್ಯೆಯನ್ನು ನೀಗಿಸಿ, ಕ್ಷೀಣಿಸುತ್ತಿರುವ ಭತ್ತದ ಬೆಳೆಗೆ ಪುನರ್ಜನ್ಮ ನೀಡುವಂತಹ ನೂತನ ಪದ್ದತಿಯನ್ನು ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಪರಿಚಯಿಸಿಕೊಟ್ಟಿರುತ್ತಾರೆ ಎಂದು ಹೇಳಿದರು.
ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾತನಾಡಿ, ಯಂತ್ರ ನಾಟಿ ಅನುಷ್ಠಾನಕ್ಕೆ ಅವಶ್ಯಕವಿರುವ ಭತ್ತದ ಆಯ್ಕೆ, ಬೀಜೋಪಚಾರ, ನಾಟಿ ಗದ್ದೆ ತಯಾರಿ, ನೀರು ನಿರ್ವಹಣೆ ಬಗ್ಗೆ ತಿಳಿಸಿದರು ಹಾಗೂ ಇಲಾಖೆಯ ವತಿಯಿಂದ ರೈತರಿಗೆ ನೀಡುವ ಸೌಲಭ್ಯಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜಿಬಾಯಿ, ಸಂಸ್ಥೆಯ ನಿರ್ದೇಶಕ ಲಕ್ಷ್ಮಣ್ ಎಂ, ಜನ ಜಾಗೃತಿ ವೇದಿಕೆ ಸದಸ್ಯರಾದ ಗೌಡ್ರು ಚನ್ನಬಸಪ್ಪ, ಶ್ರೀಮತಿ ಚೇತನಾ, ಯೋಜನಾಧಿಕಾರಿ ಶ್ರೀನಿವಾಸ್ ಬಿ, ಸುಧೀರ್ ಜೈನ್, ಕೃಷಿ ಅಧಿಕಾರಿ ಪ್ರವೀಣ್ ಹಾಗೂ ಸುನೀಲ್, ವಲಯ ಮೇಲ್ವಿ ಚಾರಕಿ ಉಮಾ, ಉಪಾಧ್ಯಕ್ಷ ಪ್ರಭಾಕರ್, ಸೇವಾ ಪ್ರತಿನಿಧಿ ಗಳಾದ ರೇಖಾ, ಕೆಂಚಮ್ಮ, ನೇತ್ರಾವತಿ, ನಾಟಿಗದ್ದೆ ಮಾಲೀಕ ರಾದ ರೇವತಿ ಕುಮಾರ್ ಮತ್ತು ಇತರು ಉಪಸ್ಥಿತರಿದ್ದರು.