45.38 ಲಕ್ಷ ಮೌಲ್ಯದ ಆಭರಣ ವಶ
ಚನ್ನಗಿರಿ, ಆ.4- ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿ ಕಳೆದ ಮೂರು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಚನ್ನಗಿರಿ ವಡ್ನಾಳ್ ರಾಜಣ್ಣ ಬಡಾವಣೆಯ ಅಫ್ರೋಜ್ ಅಹಮ್ಮದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಈತನ ಮೇಲೆ ಚನ್ನಗಿರಿ, ಹೊನ್ನಾಳಿ, ಹರಿಹರ, ಭದ್ರಾವತಿ, ಹೊಳಲ್ಕೆರೆ, ದಾವಣಗೆರೆ, ಹರಪನಹಳ್ಳಿ, ಹೊಸದುರ್ಗ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ಸುಮಾರು 30ಕ್ಕೂ ಹೆಚ್ಚು ಸ್ವತ್ತು ಕಳವು ಪ್ರಕರಣಗಳು ದಾಖಲಾಗಿವೆ.
ಚನ್ನಗಿರಿ ಪೊಲೀಸ್ ಠಾಣೆಯ 3 ಪ್ರಕರಣಗಳು, ಸಂತೇಬೆನ್ನೂರು ಠಾಣೆಯ 1 ಪ್ರಕರಣ, ತರೀಕೆರೆ ಠಾಣೆಯ 3 ಪ್ರಕರಣಗಳು, ಲಕ್ಕವಳ್ಳಿ ಪೊಲೀಸ್ ಠಾಣೆಯ 4 ಪ್ರಕರಣಗಳು, ಭದ್ರಾವತಿ ಪೇಪರ್ಟೌನ್ ಪೊಲೀಸ್ ಠಾಣೆಯ 1 ಪ್ರಕರಣ, ಹಾಗೂ ಅಜ್ಜಂಪುರ ಪೊಲೀಸ್ ಠಾಣೆಯ 1 ಪ್ರಕರಣ ಸೇರಿದಂತೆ ಒಟ್ಟು 13 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.
ಆರೋಪಿ ಹಾಗೂ ಪ್ರೇಯಸಿ ಚನ್ನಗಿರಿಯ ಭಾಗ್ಯ, ಆತನ ಸ್ನೇಹಿತ ಅಜ್ಜಿಹಳ್ಳಿ ಗ್ರಾಮದ ಪ್ರವೀಣ ಎಂಬುವರ ಕಡೆಯಿಂದ ಮತ್ತು ಅವರುಗಳು ಮಾರಿದ ಬಂಗಾರದ ಅಂಗಡಿಗಳಿಂದ ಒಟ್ಟು ಸುಮಾರು 44,38,000 ರೂ. ಮೌಲ್ಯದ 634 ಗ್ರಾಂ ಬಂಗಾರದ ಆಭರಣಗಳು ಹಾಗೂ ಸುಮಾರು 40 ಸಾವಿರ ರೂ. ಮೌಲ್ಯದ 550 ಗ್ರಾಂ ಬೆಳ್ಳಿಯ ಆಭರಣಗಳು, ಕೃತ್ಯವೆಸಗಲು ಬಳಸಿದ ಸುಮಾರು 60 ಸಾವಿರ ರೂ. ಮೌಲ್ಯದ ಕೆಎ-17 ಇವಿ-5083 ಬೈಕ್, ಎರಡು ಕಬ್ಬಿಣದ ರಾಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವು ಪ್ರಕರಣಗಳಲ್ಲಿ ಆರೋಪಿ ಮತ್ತು ಆತನ ಪ್ರೇಯಸಿ ಭಾಗ್ಯ ಸೇರಿಕೊಂಡು ಜಗಳೂರು ತಾಲ್ಲೂಕಿನಲ್ಲಿ ಓರ್ವ ವ್ಯಕ್ತಿಗೆ ಕಳ್ಳತನದ ಮಾಲನ್ನು ಮಾರಾಟ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದು, ಆತನ ಕಡೆಯಿಂದ ವಶಪಡಿಸಿಕೊಳ್ಳುವುದು ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಪತ್ತೆ ಕಾರ್ಯದಲ್ಲಿ ಸಿಪಿಐ ಲಿಂಗನಗೌಡ ನೆಗಳೂರು, ಪಿ.ಎಸ್.ಐ ಸೈಪುದ್ದೀನ್, ಗುರುಶಾಂತಯ್ಯ, ರೂಪ್ಲಿಬಾಯಿ, ಶಶಿಧರ್, ಎ.ಎಸ್.ಐ ಹಾಗೂ ಡಿಸಿಆರ್ಬಿ ಸಿಬ್ಬಂದಿಗಳಾದ ಮಜೀದ್, ಆಂಜನೇಯ, ರಾಘವೇಂದ್ರ, ರಮೇಶ್, ಬಾಲಾಜಿ, ರುದ್ರೇಶ್, ಸತೀಶ್, ಮಹೇಂದ್ರ, ಬಿರೇಶ್ವರ ಪುಟ್ಟಕ್ಕನವರ್, ರೇವಣಸಿದ್ದಪ್ಪ, ರಮೇಶ, ಚನ್ನಕೇಶವ, ಹಾಲಮ್ಮ ಹಾಗೂ ಜೀಪ್ ಚಾಲಕರಾದ ರೇವಣಸಿದ್ದಪ್ಪ, ರವಿ, ವಸಂತಕುಮಾರ, ಉಮೇಶ್, ಸಂತೋಷ್, ದೊಡ್ಡೇಶಿ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ಸಿಬ್ಬಂದಿಗಳಾದ ರಾಮಚಂದ್ರ ಜಾಧವ್, ರಾಘವೇಂದ್ರ, ಶಾಂತರಾಜ ಭಾಗವಹಿಸಿದ್ದರು.