ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಸೂಚನೆ
ಹರಿಹರ, ಆ.4- ಜಿಲ್ಲೆಯಾದ್ಯಂತ ಸುರಿದ ಅಪಾರ ಮಳೆಯಿಂದಾಗಿ ತಾಲ್ಲೂಕಿನ ರೈತರು ಮತ್ತು ಸಾರ್ವಜನಿಕರಿಗೆ ಉಂಟಾದ ಸಮಸ್ಯೆ ಯನ್ನು ಪರಿಹರಿಸಲು ಸಂಬಂಧಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳು ಶಿಸ್ತು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.
ಶನಿವಾರ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪೂರ್ವ ಸಿದ್ಧತಾ ಸಭೆಗೆ ದಿಢೀರನೆ ಆಗಮಿಸಿ ತಾಲ್ಲೂಕಿನ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಎಡಬಿಡದೇ ಸುರಿದ ಮಳೆಯಿಂದಾಗಿ ಡ್ಯಾಮ್‌ಗಳು ಭರ್ತಿಯಾಗಿದ್ದು, ನದಿಯಲ್ಲಿ ಅಪಾಯ ಮಟ್ಟದಲ್ಲಿ ನೀರು ಹರಿಯುತ್ತಿದೆ ಆದ್ದರಿಂದ ನದಿ ತಟದ ಜನರಿಗೆ ಹಾಗೂ ರೈತರಿಗೆ ಆಗುತ್ತಿರುವ ತೊಂದರೆ, ಅನಾಹುತ ತಪ್ಪಿಸುವಲ್ಲಿ ತಾಲ್ಲೂಕು ಆಡಳಿತದ ಎಲ್ಲಾ ಅಧಿಕಾರಿಗಳು ಮುಂದಾಗಬೇಕು ಎಂದರು.
ಮಳೆಯಿಂದಾಗಿ ಹಾನಿಯಾದ ಜಮೀನುಗಳು ಹಾಗೂ ಮನೆಗಳ ಬಗ್ಗೆ ಜಂಟಿಯಾಗಿ ಸರ್ವೆ ಮಾಡಿ ವರದಿ ಸಿದ್ಧ ಪಡಿಸುವ ಜತೆಗೆ ಜಾನುವಾರುಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿದರು.
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಡಿತ ಸಮಸ್ಯೆ ಮತ್ತು ಗ್ರಾಮೀಣ ಪ್ರದೇಶ ರಸ್ತೆಗಳಲ್ಲಿ ಗುಂಡಿ ಬಿದ್ದ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗದ ಹಾವಳಿ ಹೆಚ್ಚಾಗುತ್ತಿದ್ದರಿಂದ ನಗರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಈ ವೇಳೆ ತಹಶೀಲ್ದಾರ್ ಗುರುಬಸವರಾಜ್, ಬಿಇಓ ದುರುಗಪ್ಪ, ಆರೋಗ್ಯ ಇಲಾಖೆಯ ಅಬ್ದುಲ್ ಖಾದರ್, ಕೃಷಿ ಇಲಾಖೆಯ ನಾರನಗೌಡ, ಸಿಡಿಪಿಓ ಇಲಾಖೆಯ ಪೂರ್ಣಿಮಾ, ಪಿಎಸ್ಐ ಶ್ರೀಪತಿ ಗಿನ್ನಿ, ಪಶುಪಾಲನೆ ಇಲಾಖೆ ಸಿದ್ದೇಶ್, ತೋಟಗಾರಿಕೆ ಇಲಾಖೆ ಗಂಗಾಧರ್, ಲೋಕೋ ಪಯೋಗಿ ಇಲಾಖೆಯ ಸುಂದರ್, ಬಿಸಿಎಂ ಇಲಾಖೆ ಆಸ್ಮಾಬಾನು. ಪಾಟೀಲ್ ಇತರರಿದ್ದರು.