ದಾವಣಗೆರೆ, ಆ.2- ದಾವಣಗೆರೆ ಮಹಾನಗರ ಪಾಲಿಕೆಗೆ ಅಧಿಕಾರೇತರ ಸದಸ್ಯರನ್ನಾಗಿ ಐವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದ್ದು, ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ. ನಾಗೇಶ್ ಇಂದು ಆದೇಶ ಹೊರಡಿಸಿದ್ದಾರೆ.
ಸಾಮಾಜಿಕ ಸಂಘಟನೆಗಳ ಪ್ರಮುಖರಲ್ಲೊಬ್ಬ ರಾದ ಎಸ್. ಶಿವಮೂರ್ತಿ ಸುರಭಿ, ಗಾಂಧಿನಗರದ ಎಲ್.ಹೆಚ್. ಸಾಗರ್, ಶಾಮನೂರಿನ ಕೆ.ಬಿ. ರುದ್ರೇಶ್, ಬೇತೂರು ರಸ್ತೆಯ ಶ್ರೀಮತಿ ಶಾಹೀನಾ ಬಾನು ಕೋಂ ಇಬ್ರಾಹಿಂ ಖಲೀವುಲ್ಲಾ
ಮತ್ತು ಭಗತ್ ಸಿಂಗ್ ನಗರದ ಎಸ್.ಪಿ. ಹನುಮಂತರಾಜ್ ಅವರುಗಳು ಪಾಲಿಕೆ ಸದಸ್ಯರುಗಳಾಗಿ ನೇಮಕಗೊಂಡಿದ್ದಾರೆ.
ಪಾಲಿಕೆಗೆ ಅಧಿಕಾರೇತರ ಸದಸ್ಯರಾಗಿ ನೇಮಕಗೊಂಡಿರುವ ಸುರಭಿ ಶಿವಮೂರ್ತಿ ಅವರು ಛಾಯಾಗ್ರಾಹಕರಾಗಿ ತಮ್ಮ ವೃತ್ತಿಯನ್ನು ಆರಂಭಿಸಿ, ಜಿಲ್ಲಾ ಛಾಯಾಗ್ರಾಹಕರ ಸಂಘ, ಲಯನ್ಸ್ ಕ್ಲಬ್, ಸಿನಿಮಾ ಸಿರಿ ಸೇರಿದಂತೆ, ಸಾಮಾಜಿಕ ಸಂಘಟನೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಕಾಂಗ್ರೆಸ್ ಈ ನೇಮಕ ಮಾಡಿದೆ.
ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್, ಲೋಕಸಭಾ ಸದಸ್ಯರಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಅವರುಗಳು ಮಾಡಿದ ಶಿಫಾರಸ್ಸಿನ ಮೇರೆಗೆ ಸರ್ಕಾರ ಸುರಭಿ ಶಿವಮೂರ್ತಿ ಸೇರಿದಂತೆ, ಐವರನ್ನು ಪಾಲಿಕೆ ಸದಸ್ಯರನ್ನಾಗಿಸಿದೆ.