ದಾವಣಗೆರೆ, ಆ. 1- ಸ್ಥಳೀಯ ನಿವಾಸಿಗಳಿಗೆ ಕಿರಿಕಿರಿ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಶಿವಕುಮಾರಸ್ವಾಮಿ ಬಡಾವಣೆ ಒಂದನೇ ಹಂತದಲ್ಲಿರುವ ಸರ್.ಎಂ.ವಿ. ಕಾಲೇಜನ್ನು ಸ್ಥಳಾಂತರ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ನಿರ್ದೇಶಕರಿಗೆ ಪಿಯು ಡಿಡಿ ಮೂಲಕ ಮನವಿ ಸಲ್ಲಿಸಿದರು.
ಸಣ್ಣ ಮಕ್ಕಳು, ವಯೋವೃದ್ಧರು, ಮಹಿಳೆಯರು, ವಿದ್ಯಾರ್ಥಿಗಳು ಸರಾಗವಾಗಿ ಓಡಾಡಲು ಆಗುತ್ತಿಲ್ಲ. ಎಲ್ಲಿ ನೋಡಿದರೂ ವಿದ್ಯಾರ್ಥಿಗಳ ಗುಂಪು, ಗಲಾಟೆ, ಶಬ್ಧ, ಧೂಳಿನಿಂದ ಕೂಡಿದ ವಾತಾವರಣ ಇದೆ. ಕಾಲೇಜು ಎದುರಿಗೆ ಹದಡಿ ಮುಖ್ಯ ರಸ್ತೆಯಿಂದ ಎರಡೂ ಬದಿಗಳಲ್ಲಿ ಬ್ಯಾಂಕ್, ಆಸ್ಪತ್ರೆ, ಮಾರ್ಟ್‌ಗಳಿದ್ದು, ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪೋಷಕರು ಕಾಲೇಜಿನ ಅಕ್ಕಪಕ್ಕದಲ್ಲಿರುವ ಮನೆಗಳ ಮುಂದೆ, ಖಾಲಿ ಸೈಟುಗಳಲ್ಲಿ, ಓಡಾಡುವ ರಸ್ತೆ ಮುಂದೆ ವಾಹನಗಳನ್ನು ನಿಲ್ಲಿಸಿಕೊಂಡು ಸಂಚಾರಕ್ಕೂ ಅಡ್ಡಿ ಉಂಟು ಮಾಡುತ್ತಿದ್ದಾರೆ. ಇಷ್ಟಲ್ಲದೇ ಗುಟ್ಕಾ ತಿಂದು ಎಲ್ಲೆಂದರಲ್ಲಿ ಉಗಿಯುವುದು, ಸೀಗರೇಟ್ ಸೇದುವುದು, ತಿಂಡಿ ಪದಾರ್ಥಗಳನ್ನು ತಿಂದು ಎಲ್ಲೆಂದರಲ್ಲಿ ಖಾಲಿ ಪಾಕೆಟ್‌ಗಳನ್ನು ಎಸೆಯುತ್ತಿದ್ದಾರೆ ಎಂದು ದೂರಿದ್ದಾರೆ.
ಕೂಡಲೇ ಕಾಲೇಜು ಸ್ಥಳಾಂತರ ಮಾಡಿ, ಈ ಭಾಗದ ನಾಗರಿಕರು ಆರೋಗ್ಯ, ನೆಮ್ಮದಿಯಿಂದ ಬದುಕಲು ಅವಕಾಶ ನೀಡುವಂತೆ ನಾಗರಿಕರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕೆ.ಹೆಚ್.ಲೋಕೇಶ್, ಡಿ. ರವೀಂದ್ರ, ಪಿ.ಆರ್. ದಿನೇಶ್, ರಾಮಚಂದ್ರ ಶೆಟ್ರು, ನೀಲಕಂಠಪ್ಪ, ವಿರೂಪಾಕ್ಷಪ್ಪ, ಕೆ.ಎಸ್. ಸತೀಶ್, ಅಂಕಿತ್ ಮತ್ತಿತರರಿದ್ದರು.