ಮಲೇಬೆನ್ನೂರು, ಜು.31- ಮಲೆನಾಡಿನಲ್ಲಿ ಮುಂಗಾರು ಮಳೆ ಮಂಗಳವಾರ ಬೆಳಗ್ಗೆಯಿಂದ ಮತ್ತೆ ವ್ಯಾಪಕ ಸುರಿಯುತ್ತಿದ್ದು, ತುಂಗಾ ಮತ್ತು ಭದ್ರಾ ನದಿಯಲ್ಲಿ ನೀರಿನ ಹರಿವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.
ಗಾಜನೂರಿನ ತುಂಗಾ ಜಲಾಶಯಕ್ಕೆ ಬುಧವಾರ ಬೆಳಗ್ಗೆ 82 ಸಾವಿರ ಕ್ಯೂಸೆಕ್ಸ್ ಇದ್ದು, ಅಷ್ಟೇ ಪ್ರಮಾಣದ ನದಿಗೆ ಹರಿಸಲಾಗುತ್ತಿದೆ. ಜೊತೆಗೆ ಭದ್ರಾ ಜಲಾಶಯಕ್ಕೆ ಬುಧವಾರ ಬೆಳಗ್ಗೆ 60 ಸಾವಿರ ಕ್ಯೂಸೆಕ್ಸ್ ಇದ್ದು, ಸುಮಾರು 42 ಸಾವಿರ ಕ್ಯೂಸೆಕ್ಸ್ ನೀರನ್ನು ಭದ್ರಾ ನದಿಗೆ ಬಿಡಲಾಗಿದೆ.
ಇದರಿಂದಾಗಿ ತುಂಗಭದ್ರಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಭೀತಿ ಸೃಷ್ಟಿಸಿದೆ. ಉಕ್ಕಡಗಾತ್ರಿ – ಫತ್ತೇಪುರ ಸಂಪರ್ಕ ಸೇತುವೆಯ ಜೊತೆಗೆ ಉಕ್ಕಡಗಾತ್ರಿ – ಮಾಳನಾಯಕನಹಳ್ಳಿ ಸಂಪರ್ಕ ಸೇತುವೆಯೂ ನದಿ ಹಿನ್ನೀರಿನಲ್ಲಿ ಜಲಾವೃತವಾಗಿದೆ. ಅಲ್ಲದೇ ನದಿ ನೀರು ಉಕ್ಕಡಗಾತ್ರಿಗೆ ಜಲ ದಿಗ್ಬಂಧನ ಹಾಕಿದ್ದು, ಗ್ರಾಮದಲ್ಲಿ ಜನರು ನದಿ ಹತ್ತಿರ ಬರದಂತೆ ಗ್ರಾ.ಪಂ ನಿಂದ ದ್ವನಿವರ್ಧಕ ಮೂಲಕ ಪ್ರಚಾರ ಪಡಿಸಿದ್ದಾರೆ. ಉಕ್ಕಡಗಾತ್ರಿಗೆ ಬರುವ ಭಕ್ತರು ನದಿ ಪ್ರವಾಹ ಕಡಿಮೆ ಆದ ನಂತರ ಆಗಮಿಸುವಂತೆ ದೇವಸ್ಥಾನದ ಕಾರ್ಯದರ್ಶಿ ಸುರೇಶ್ ತಿಳಿಸಿದ್ದಾರೆ.
ತೋಟ – ಗದ್ದೆ ಜಲಾವೃತ : ತುಂಗಭದ್ರಾ ನದಿ ಪಾತ್ರದಲ್ಲಿರುವ ನೂರಾರು ಎಕರೆ ತೋಟ ಗದ್ದೆಗಳು ನೀರಿನಲ್ಲಿ ಮುಳುಗಿವೆ.
ಎಚ್ಚರ ವಹಿಸಿ : ತುಂಗ ಮತ್ತು ಭದ್ರಾ ನದಿಗಳ ನೀರಿನಿಂದ ತುಂಗಭದ್ರಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿರುವುದರಿಂದ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮತ್ತು ಪಂಪ್ ಸೆಟ್‌ಗಳಿಗೆ ಅಳವಡಿಸಿರುವ ವಿದ್ಯುತ್ ಸಂಪರ್ಕ ತಪ್ಪಿಸುವಂತೆ ಮಲೇಬೆನ್ನೂರು ಉಪ ತಹಸೀಲ್ದಾರ್ ಆರ್.ರವಿ ಮತ್ತು ಪಿಎಸ್ಐ ಪ್ರಭು ಕೆಳಗಿನಮನಿ ಮನವಿ ಮಾಡಿದ್ದಾರೆ.