ದಾವಣಗೆರೆ, ಜು. 28- ಭಾರತ ವಿಕಾಸ್ ಪರಿಷದ್ ಗೌತಮ ಶಾಖೆ ದಾವಣಗೆರೆ ಇವರ ಸಂಸ್ಕಾರ ಹಾಗೂ ಸೇವಾ ಯೋಜನೆಯಡಿಯಲ್ಲಿ ಸ್ಥಳೀಯ ಸಿದ್ಧವೀರಪ್ಪ ಬಡಾವಣೆಯಲ್ಲಿರುವ ಹಳ್ಳಿ ಮಹದೇವಪ್ಪ ಪ್ರೌಢಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸಮವಸ್ತ್ರ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೌತಮ ಶಾಖೆಯ ಅಧ್ಯಕ್ಷ ಅಜ್ಜಂಪುರ ಶೆೆಟ್ರು ವಿಜಯಕುಮಾರ್ ಮಾತನಾಡಿ, ಕಾರ್ಯಕ್ರಮದ ಉದ್ದೇಶ ಹಾಗೂ ಸುಮಾರು ಮೂರ್ನಾಲ್ಕು ವರ್ಷಗಳಿಂದ ಈ ಸೇವೆ ನಡೆಸಲು ತಮ್ಮ ಶಾಖೆಯ ಸದಸ್ಯರು ತಮ್ಮ ಸಹಾಯ ಹಸ್ತ ನೀಡುತ್ತಿರುವುದು ಶ್ಲ್ಯಾಘನೀಯ ಎಂದು ತಮ್ಮ ಸಂಘದ ಇತರೆ ಸೇವಾ ಕಾರ್ಯಗಳ ವಿವರಣೆ ನೀಡಿದರು.
ದಕ್ಷಿಣ ಪ್ರಾಂತೀಯ ಪರಿಸರ ಯೋಜನಾ ಕಾರ್ಯದರ್ಶಿ ಟಿ.ಎಸ್. ಜಯರುದ್ರೇಶ್ ಮಾತನಾಡಿ, ಮಕ್ಕಳಿಗೆ ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ನೀವು ಬೇರೆ ಕನಿಷ್ಟ 5 ಮಕ್ಕಳಿಗೆ ಸಹಾಯ ಮಾಡುವ ಸಂಕಲ್ಪ ಮಾಡಿ ಎಂದು ತಿಳಿಸಿದರು.
ದಾವಣಗೆರೆ ಶಾಖೆಯ ಸಂಘಟನಾ ಕಾರ್ಯದರ್ಶಿ ಹಾಗೂ ಪ್ರಾಂತೀಯ ಕೋಶಾಧಿಕಾರಿ ಪುಟ್ಟಪ್ಪ ಮಾತನಾಡಿ, ಮಕ್ಕಳಿಗೆ ನಮ್ಮ ಶಾಖೆಯ ಇತರೆ ಯೋಜನೆಯಡಿಯಲ್ಲಿ ಬರುವ ಆರೋಗ್ಯ, ಶಿಕ್ಷಣ ಇತರೆ ಸೇವೆಯನ್ನು ಈ ಶಾಲೆಗೆ ವಿಸ್ತರಿಸುವ ವಿಷಯ ತಿಳಿಸಿ ಶುಭ ಹಾರೈಸಿದರು.
ಡಾ. ಆರತಿ ಸುಂದರೇಶ್ ಮಾತನಾಡಿ, ಭಾರತ ವಿಕಾಸ ಪರಿಷತ್ನಿಂದ ನಡೆಸುವ ಭಾರತ್ ಅನ್ನು ತಿಳಿಯಿರಿ ಎನ್ನುವ ರಸಪ್ರಶ್ನೆ ಕಾರ್ಯಕ್ರಮದ ಬಗ್ಗೆ ತಿಳಿಸಿ, ಮಕ್ಕಳು ಇದರಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದರು.
ಪರಿಷತ್ ಸದಸ್ಯ ಜಯಪ್ರಕಾಶ್ ಮಾಗಿ ಮಾತನಾಡಿದರು. ಭವಾನಿ ಶಂಭುಲಿಂಗಪ್ಪ ವಂದೇ ಮಾತರಂ ಹಾಡಿದರು. ಶಾಖೆಯ ಸಂಪರ್ಕ ಪ್ರಮುಖ್ ವಿಜೇಂದ್ರ ನಿರೂಪಿಸಿದರು. ಶಾಖೆಯ ಕಾರ್ಯದರ್ಶಿ ಮಧುಕರ್ ವಂದಿಸಿದರು. ಮಂಜುನಾಥ್, ಶ್ರೀಮತಿ ನೇತ್ರ ಮಧುಕರ್, ಪ್ರದೀಪ್ ಈ ಸದಂರ್ಭದಲ್ಲಿ ಉಪಸ್ಥಿತರಿದ್ದರು.