ದಾವಣಗೆರೆ, ಜು.28- ಮದುವೆಯಾಗುವುದಾಗಿ ನಂಬಿಸಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ 10 ವರ್ಷ ಜೈಲು ಹಾಗೂ 50 ಸಾವಿರ ದಂಡ ವಿಧಿಸಿ ಪೋಕ್ಸೊ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಚನ್ನಗಿರಿ ತಾಲ್ಲೂಕಿನ ಅಣ್ಣಾಪುರ ಗ್ರಾಮದ ಸಚಿನ್ (24) ಶಿಕ್ಷೆಗೆ ಗುರಿಯಾದ ಅಪರಾಧಿ. ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಶ್ರೀರಾಮ್ ನಾರಾಯಣ ಹೆಗ್ಡೆ ಆದೇಶ ನೀಡಿದ್ದಾರೆ.
ವೃತ್ತಿಯಲ್ಲಿ ಆಟೊ ಚಾಲಕನಾಗಿದ್ದ ಸಚಿನ್, 2021 ಸೆ.11ರಂದು ಬಾಲಕಿಯನ್ನು ಅಪಹರಿಸಿದ್ದನು. ಚಿಕ್ಕಮಗಳೂರು ಜಿಲ್ಲೆಗೆ ಕರೆದೊಯ್ದು ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದನು.
ಈ ಸಂಬಂಧ ಚನ್ನಗಿರಿ ಠಾಣೆಯ ಪೊಲೀಸರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಸಂತ್ರಸ್ತೆಯ ಪರವಾಗಿ ಸರ್ಕಾರಿ ವಕೀಲರಾದ ಸುನಂದ ಮಡಿವಾಳರ್ ವಾದ ಮಂಡಿಸಿದ್ದರು.