ದಾವಣಗೆರೆ, ಜು. 28- ಮನುಷ್ಯನಿಗೆ ಆರೋಗ್ಯವೇ ಭಾಗ್ಯ ಎಂಬುದು ಸರ್ವಕಾಲಿಕ ಮಾತು. ಇದು ಅಷ್ಟೇ ಸತ್ಯವೂ ಕೂಡ. ಆರೋಗ್ಯವನ್ನು ರಕ್ಷಿಸುವುದು, ಅನಾರೋಗ್ಯಕ್ಕೆ ಮದ್ದು ನೀಡಿ ಗುಣಪಡಿಸುವುದು ವೈದ್ಯರ ಕರ್ತವ್ಯವಾಗಿದೆ ಎಂದು ಜೆಜೆಎಂ ಮೆಡಿಕಲ್ ಕಾಲೇಜಿನ ರೋಗಶಾಸ್ತ್ರ ವಿಭಾಗದ ವೈದ್ಯ ಡಾ. ವೀರೇಂದ್ರ ಕುಲಕರ್ಣಿ ತಿಳಿಸಿದರು.
ನಗರದ ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳೆದ ವಾರ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಮಗೆ ತಾರುಣ್ಯಾವಸ್ಥೆಯಲ್ಲಿ ದೈಹಿಕ ಬೆಳವಣಿಗೆ ಅತ್ಯಂತ ವಿಶೇಷವಾದದ್ದು, ಅದನ್ನು ನಮ್ಮ ಹತೋಟಿಯಲ್ಲಿ ಹೇಗೆ ನಿಯಂತ್ರಣ ಮಾಡಿಕೊಳ್ಳಬೇಕು ಎಂಬು ದನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ರಸ್ತೆ ಬದಿಯಲ್ಲಿ ಬೇಗನೆ ತಯಾರಾಗುವಂತಹ ಆಹಾರವನ್ನು ಅತಿಯಾಗಿ ಸೇವಿಸಬಾರದು, ದಿನನಿತ್ಯ ನಿಮ್ಮ ಮನೆಯಲ್ಲಿ ಸಿಗುವಂತಹ ಸೌಂದರ್ಯ ವರ್ಧಕಗಳನ್ನು ಅತಿ ಹೆಚ್ಚಾಗಿ ಬಳಸಬಾರದು. ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದರು.
ನಿಮ್ಮಲ್ಲಿ ಏನಾದರೂ ಮಾನಸಿಕ ಒತ್ತಡವಿದ್ದರೆ ನಿಮ್ಮ ಪೋಷಕರ ಹತ್ತಿರ ಹಾಗೂ ಶಿಕ್ಷಕರ ಹತ್ತಿರ ವಿಷಯವನ್ನು ಹಂಚಿಕೊಳ್ಳಬೇಕು. ಪ್ರತಿನಿತ್ಯ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವಂತಹ ಆಟಗಳನ್ನು ಆಡುವುದರ ಜೊತೆಗೆ ಶಿಕ್ಷಕರಿಂದ ಒಳ್ಳೆಯ ಸಂಸ್ಕಾರವನ್ನು ತಮ್ಮ ಜೀವನದಲ್ಲಿ ರೂಢಿಸಿಕೊಂಡು ಬದುಕಿದರೆ ಸುಖೀ ಜೀವನ ನಿಮ್ಮದಾಗಿರುತ್ತದೆ ಎಂದು ಕರೆ ನೀಡಿದರು.
ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಎಸ್. ಅನುರೂಪ ಅವರು, ವಿದ್ಯಾರ್ಥಿನಿಯರಿಗೆ ತಾರುಣ್ಯಾವಸ್ಥೆಯಲ್ಲಿರುವ, ಜೈವಿಕ ಮತ್ತು ಭೌತಿಕ ಸಮಸ್ಯೆಗಳು, ಋತುಚಕ್ರದ ಸಮಸ್ಯೆಗಳಿಗೆ ಪರಿಹಾರ, ಆರೋಗ್ಯಯುತ ಆಹಾರ ಪದ್ಧತಿ ರೂಢಿಸಿಕೊಳ್ಳುವುದು, ರಕ್ತಹೀನತೆ, ದೇಹದಲ್ಲಿನ ಹಾರ್ಮೋನುಗಳ ವ್ಯತ್ಯಾಸ, ಆತಂಕ, ಸಂವಾದಾತ್ಮಕ ಸಮಸ್ಯೆಗಳಿಗೆ ಪರಿಹಾರ ನೀಡುವುದು ಹಾಗೂ ವಿದ್ಯಾರ್ಥಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿ ಆರೋಗ್ಯದ ಅರಿವು ಮೂಡಿಸಿದರು.
ಶಾಲೆಯ ಮುಖ್ಯಸ್ಥ ಮಂಜುನಾಥ ರಂಗರಾಜು ಮಾತನಾಡಿ, ‘ವೈದ್ಯೋ ನಾರಾಯಣ ಹರಿ’ ಎನ್ನುವುದು ವೈದ್ಯಕೀಯ ಕ್ಷೇತ್ರಕ್ಕೆ ಸಾಕ್ಷಿಯಾಗಿದೆ. ಅದಕ್ಕಾಗಿ ವೈದ್ಯರನ್ನ ದೇವರಿಗೆ ಹೋಲಿಸಲಾಗುತ್ತದೆ. ಅನಾರೋಗ್ಯಕ್ಕೆ ತುತ್ತಾದ ಪ್ರತಿಯೊಬ್ಬ ರೋಗಿಯನ್ನು ಸರಿಯಾದ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಿ, ಅವರಿಗೆ ಪುನರ್ಜನ್ಮ ನೀಡುವುದು ಪ್ರತಿಯೊಬ್ಬ ವೈದ್ಯರ ಕಾಯಕವಾದರೆ, ಅವರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಜೆ.ಎಸ್. ವನಿತಾ ಅವರು, ಪ್ರತಿಯೊಬ್ಬ ವಿದ್ಯಾರ್ಥಿಗೂ ಸಹ ವಿದ್ಯಾರ್ಥಿ ಜೀವನದಲ್ಲಿ ನುರಿತ, ಅನುಭವಿ ವೈದ್ಯರಿಂದ ತಾರುಣ್ಯಾವಸ್ಥೆಯಲ್ಲಿ ತಮ್ಮ ಬದುಕು ಹಾಗೂ ಜೀವನ ಶೈಲಿ ಹೇಗೆ ರೂಡಿಸಿಕೊಳ್ಳಬೇಕು ಎಂಬ ಅಂಶಗಳನ್ನು ತಿಳಿಯುವುದು ಅತ್ಯಂತ ಸೂಕ್ತ ಎಂದು ತಿಳಿಸಿದರು.
ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಶೋಭಾರಾಣಿ, ಪ್ರಭು ಪಿ.ವಿ, ಶೈಕ್ಷಣಿಕ ಸಂಶೋಧಕ ವಾಸಿಮ್ ಪಾಷಾ ಎಂ, ಶ್ರೀಮತಿ ಸವಿತಾ ಆರ್, ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.