ದೊಣೆಹಳ್ಳಿಯ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಡಾ. ಟಿ.ಜಿ ರವಿಕುಮಾರ್
ಜಗಳೂರು, ಜು.26- ಪರಿಸರ ಸ್ವಚ್ಛತೆ ರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಅತ್ಯಗತ್ಯವಾಗಿದೆ ಎಂದು ಪ್ರೀತಿ ಆರೈಕೆ ಟ್ರಸ್ಟ್‌ನ ಕಾರ್ಯದರ್ಶಿ ಡಾ.ಟಿ. ಜಿ ರವಿಕುಮಾರ್ ಅಭಿಪ್ರಾಯಿಸಿದರು.
ತಾಲ್ಲೂಕಿನ ದೊಣೆಹಳ್ಳಿಯಲ್ಲಿ ಪ್ರೀತಿ ಆರೈಕೆ ಟ್ರಸ್ಟ್ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಸಹಯೋಗದಲ್ಲಿ `ಆರೋಗ್ಯ ದಾಸೋಹದ ಮೂಲಕ ಆರೋಗ್ಯ ಜಾಗೃತಿ’ ಕಾರ್ಯಕ್ರಮದಡಿಯಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ರಾಜ್ಯವ್ಯಾಪಿ ಡೆಂಗ್ಯೂ ಮಹಾಮಾರಿ ಸೋಂಕು ರುದ್ರನರ್ತನ ಮಾಡುತ್ತಿದೆ. ಇದರಿಂದ ಸಾಕಷ್ಟು ರೋಗಿಗಳು ಜ್ವರದಿಂದ ಬಳಲುತ್ತಿದ್ದಾರೆ. ಮನೆಗಳಲ್ಲಿ ಮಾತ್ರವಲ್ಲದೆ, ಸುತ್ತಮುತ್ತಲ ಪರಿಸರ ಸ್ವಚ್ಛತೆಗೊಳಿಸುವ ಮೂಲಕ ಜ್ವರದ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.
ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಸಲಹೆಯಂತೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘ ಆರ್ಥಿಕ ಸಾಲ ಸೌಲಭ್ಯ ಒದಗಿಸುವುದು, ಕೆರೆ ಸಂಜೀವಿನಿ ಯೋಜನೆ, ಮದ್ಯವರ್ಜನೆ ಶಿಬಿರಗಳು, ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಮತ್ತು ಆರೋಗ್ಯ ಸೇವೆಗೆ ಮುಂದಾಗಿರುವುದು ಶ್ಲ್ಯಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಗ್ರಾ.ಪಂ ಅಧ್ಯಕ್ಷ ಮರೇನಹಳ್ಳಿ ತಿಪ್ಪೇಸ್ವಾಮಿ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿನ ಚರಂಡಿ ನೈರ್ಮಲ್ಯ ಕಾಪಾಡುವುದಲ್ಲದೆ, ಶುದ್ದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಸಾರ್ವಜನಿಕರು ಚರಂಡಿ ಸೇರಿದಂತೆ, ಎಲ್ಲೆಂದರಲ್ಲಿ ಕಸ ಎಸೆಯದೆ ಕಸದ ವಾಹನದಲ್ಲಿ ಹಾಕುವ ಮೂಲಕ ಗ್ರಾಮದ ಸ್ವಚ್ಛತೆಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಯೋಜನಾಧಿಕಾರಿ ಗಣೇಶ್ ನಾಯ್ಕ, ಗ್ರಾ.ಪಂ. ಸದಸ್ಯರಾದ ವೀರೇಶ್, ಗುರುಮೂರ್ತಿ, ಬಸವರಾಜ್ ಮತ್ತು ಗ್ರಾಮಸ್ಥರು ಇದ್ದರು.