ಮದರ್ ಥೆರೆಸಾ, ಡಾ. ಬಿ.ಸಿ. ರಾಯ್ ಸೇವಾ ಪ್ರಶಸ್ತಿ ಪ್ರದಾನ

ಮದರ್ ಥೆರೆಸಾ, ಡಾ. ಬಿ.ಸಿ. ರಾಯ್ ಸೇವಾ ಪ್ರಶಸ್ತಿ ಪ್ರದಾನ

ದಾವಣಗೆರೆ, ಜು. 25- ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಿಂದ ನಗರದ ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗೆ ಈಚೆಗೆ ಮದರ್ ಥೆರೆಸಾ ಮತ್ತು ಡಾ. ಬಿ.ಸಿ. ರಾಯ್ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಸ್.ಪಿ. ಮಧು, ಪ್ರಸೂತಿ ತಜ್ಞೆ  ಡಾ. ಎಸ್.ಜಿ. ಭಾರತಿ, ಅರಿವಳಿಕೆ ತಜ್ಞ ಡಾ. ಎಸ್.ಸಿ. ಬಸವರಾಜ, ಶುಶ್ರೂಷಾಧಿಕಾರಿ ಕೆ.ಹೆಚ್. ಸುಧಾ, ಸಹಾಯಕ ಆಡಳಿತಾಧಿಕಾರಿ ಟಿ.ಪಿ. ಹೇಮಣ್ಣ ಇವರು ಪ್ರಶಸ್ತಿ ಸ್ವೀಕರಿಸಿದರು.

ಟ್ರಸ್ಟ್ ಅಧ್ಯಕ್ಷ ಡಾ. ಹೆಚ್.ಎನ್. ಮಲ್ಲಿಕಾರ್ಜುನ್ ಮಾತನಾಡಿ, ಟ್ರಸ್ಟ್‌ನಿಂದ ಮಸಾಜದಲ್ಲಿ ಒಳ್ಳೆಯ ಕೆಲಸ ಮಡುವವರನ್ನು ಗುರುತಿಸಿ, ಕೃತಜ್ಞತೆ ಸಲ್ಲಿಸುವ ಕಾರ್ಯ ಸದಾ ನಡೆಯುತ್ತಲೇ ಬಂದಿದೆ. ಲಕ್ಷ್ಯಾ ಮಾತೃ ಆರೋಗ್ಯ ಕಾರ್ಯಕ್ರಮದಡಿ ಆಸ್ಪತ್ರೆಗೆ ರಾಷ್ಟ್ರೀಯ ಗುಣಮಟ್ಟದ ಪ್ರಮಾಣ ಪತ್ರ ಲಭಿಸಿರುವ ಪ್ರಯುಕ್ತ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.

ಟ್ರಸ್ಟಿನ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ, ಆಸ್ಪತ್ರೆಯ ಎಲ್ಲರೂ ಶ್ರಮ, ಶ್ರದ್ಧೆ, ಪ್ರಾಮಾಣಿಕತೆ, ಪ್ರೀತಿ, ವಿಶ್ವಾಸದಿಂದ ಕಾರ್ಯವೆಸಗಿದ್ದಕ್ಕಾಗಿ ಈ ಪ್ರಶಸ್ತಿಗೆ ಭಾಜನರಾಗಿದ್ದೀರಿ ಎಂದು ಹೇಳಿದರು.

ಹೆಚ್ಚಿನ ಸಾಧನೆಗೆ ಬುದ್ಧನ ಜೀವನಾನಂದದ ಸೂತ್ರಗಳಾದ ಉದಾರತೆ, ಉತ್ಸಾಹ ತುಂಬುವ ಪ್ರಯತ್ನ, ತಾಳ್ಮೆ, ತನ್ನ ಮತ್ತು ಇತರರ ಮೇಲಕ್ಕೆತ್ತುವ ವಿವೇಕ, ಪ್ರಜ್ಞಾಪೂರ್ವಕ ಎಚ್ಚರ, ನೈತಿಕ ಸ್ವಯಂ ಶಿಸ್ತು ಇವುಗಳ ಅಳವಡಿಕೆ ಬಹುಮುಖ್ಯ ಎಂದು ತಿಳಿಸಿದರು.

ವೈದ್ಯಕೀಯ ಅಧೀಕ್ಷಕ ಡಾ. ಎಸ್.ಪಿ. ಮಧು ಮಾತನಾಡಿ, ನಮ್ಮ ಆಸ್ಪತ್ರೆಗೆ ಲಭಿಸಿರುವ ಈ ಗೌರವಕ್ಕೆ ಪ್ರತಿಯೊಬ್ಬ ಸಿಬ್ಬಂದಿ ಕಾರಣ. ಅವರೆಲ್ಲರಿಗೂ ಈ ಗೌರವ ಸಲ್ಲಬೇಕು ಎಂದರು. ಕರುಣಾ ಟ್ರಸ್ಟಿನ ಸಿಬ್ಬಂದಿ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿ ಭಾಗವಹಿಸಿದ್ದರು.

error: Content is protected !!