ದಾವಣಗೆರೆ, ಜು. 25 – ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ 2024ನೇ ಸಾಲಿನ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಲಿಖಿತ ಪರೀಕ್ಷೆಗಳು ನಾಡಿದ್ದು ದಿನಾಂಕ 27 ಮತ್ತು 28ರಂದು ನಡೆಯಲಿವೆ ಎಂದು ಮಹತೀ ಸಂಗೀತ ಮಹಾ ವಿದ್ಯಾಲಯದ ಎಂ.ದ್ವಾರಕೀಶ್ ತಿಳಿಸಿದರು.
ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ಈ ಮೂರು ಜಿಲ್ಲೆಯ ಸಂಗೀತ ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರವು ನಗರದ ಮಾಗನೂರು ಬಸಪ್ಪ ಪಬ್ಲಿಕ್ ಶಾಲೆಯಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಡಿದ್ದು ದಿನಾಂಕ 27ರ ಶನಿವಾರ ಮಧ್ಯಾಹ್ನ 1ರಿಂದ 3.30ರ ಅವಧಿಯಲ್ಲಿ ಜ್ಯೂನಿಯರ್ ವಿಭಾಗದ ಶಾಸ್ತ್ರ ಪತ್ರಿಕೆ ಪರೀಕ್ಷೆ ಹಾಗೂ ಮಧ್ಯಾಹ್ನ 4ರಿಂದ 4.30ರ ವರೆಗೆ ಜ್ಯೂನಿಯರ್ ವಿಭಾಗದ ಶ್ರವಣ ಜ್ಞಾನ ಹಾಗೂ ದೃಶ್ಯಜ್ಞಾನ ಲಿಖಿತ ಪರೀಕ್ಷೆ ನಡೆಯಲಿದೆ.
ದಿನಾಂಕ 28ರ ಬೆಳಗ್ಗೆ 10ರಿಂದ 12.30ರ ಅವಧಿಯಲ್ಲಿ ಶಾಸ್ತ್ರ ಪತ್ರಿಕೆ-1ರ ಸೀನಿಯರ್ ವಿದ್ವತ್ ಪೂರ್ವ, ವಿದ್ವತ್ ಅಂತಿಮ ಹಾಗೂ ಮಧ್ಯಾಹ್ನ 1.30 ರಿಂದ 4ರ ವರೆಗೆ ಶಾಸ್ತ್ರ ಪತ್ರಿಕೆ-2ರ ಸೀನಿಯರ್ ವಿದ್ವತ್ ಪೂರ್ವ, ವಿದ್ವತ್ ಅಂತಿಮ ಪರೀಕ್ಷೆ ನಡೆಯಲಿದೆ ಎಂದು ವಿವರಿಸಿದರು.
ಆಗಸ್ಟ್ 3, 4, 10 ಮತ್ತು 11ರಂದು ಸಂಗೀತ ಮತ್ತು ನೃತ್ಯ ಪರೀಕ್ಷೆಗಳ ಜ್ಯೂನಿಯರ್ ಮತ್ತು ಸೀನಿಯರ್ ಹಂತಗಳ ಪ್ರಾಯೋಗಿಕ ಪರೀಕ್ಷೆ ನಡೆಸಲಿದ್ದೇವೆ ಎಂದು ಮಾಹಿತಿ ನೀಡಿದರು. ಸಂಗೀತ ಮತ್ತು ನೃತ್ಯ ಪರೀಕ್ಷೆಯನ್ನು ಮೂರು ಜಿಲ್ಲೆಗಳಿಂದ 496 ವಿದ್ಯಾರ್ಥಿಗಳು ತೆಗೆದುಕೊಂಡಿದ್ದು, ಅದರಲ್ಲಿ 296 ಜ್ಯೂನಿಯರ್ ವಿದ್ಯಾರ್ಥಿಗಳಿದ್ದಾರೆ.
ಸಂಗೀತ ಪರೀಕ್ಷೆಗಳಿಗೆ ಸಂಬಂಧಿಸಿದ ಮಾಹಿತಿಗಾಗಿ 9448872944, 9986044145 ಹಾಗೂ 9901715102 ಗೆ ಸಂಪರ್ಕಿಸಲು ತಿಳಿಸಿದ್ದಾರೆ.
ಸಂಸ್ಥೆಯ ನಿರ್ದೇಶಕ ಶ್ರೀಧರ್, ನಿರ್ದೇಶಕಿ ಸವಿತಾ ಕೂಲಂಬಿ, ಕಾಂಚನಾ ಸತೀಶ್, ಡಾ. ಮಂಗಳಾ ಶೇಖರ್, ಬೃಂದಾ, ರಾಜಶೇಖರ್ ಬೆನ್ನೂರು ಸುದ್ದಿಗೋಷ್ಠಿಯಲ್ಲಿದ್ದರು.