ತೊಗರಿ ಬೆಳೆ ನಿರ್ವಹಣೆಗೆ ಬೇಸಾಯ ತಜ್ಞರ ಸಲಹೆ

ತೊಗರಿ ಬೆಳೆ ನಿರ್ವಹಣೆಗೆ ಬೇಸಾಯ ತಜ್ಞರ ಸಲಹೆ

ದಾವಣಗೆರೆ, ಜು.25- ಜಿಲ್ಲೆಯಲ್ಲಿ ತೊಗರಿ ಬೆಳೆಯ ವಿಸ್ತರಣೆ ಮುಂಗಾರಿನಲ್ಲಿ ಹೆಚ್ಚಾಗಿದೆ. ತೊಗರಿ ಅಂತರ ಬೆಳೆಯಾಗಿ ಮೆಕ್ಕೆಜೋಳ, ಅಡಿಕೆ ಹಾಗೂ ಇತರೆ ಬೆಳೆಗಳಲ್ಲಿ ಬೆಳೆಯಲಾಗಿದೆ ಈ ನಿಟ್ಟಿನಲ್ಲಿ ತೊಗರಿಯ ಇಳುವರಿ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯಗತ್ಯ ಎಂದು ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ್‌ ಹೇಳಿದರು. ಬೆಳೆಯು ಬಿತ್ತನೆಯಾಗಿ 50 ದಿನಗಳ ನಂತರ ಬೆಳೆಯ ಮೇಲ್ಭಾಗವನ್ನು ಯಂತ್ರದ ಮೂಲಕ ಚಿವುಟುವುದರಿಂದ ಅರೆ ಕೊಂಬುಗಳು ಹೆಚ್ಚಾಗುತ್ತದೆ ಎಂದರು.

ಸಮಗ್ರ ಕೀಟ ನಿರ್ವಹಣೆ : ಗೂಡುಮಾರು ಕೀಟದ ನಿಯಂತ್ರಣಕ್ಕೆ ತತ್ತಿ ನಾಶಕವಾದ ಪ್ರೊಫೆನೋಫಾಸ 2 ಎಂಎಲ್ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು.

ಕಾಯಿ ಕೊರಕದ ನಿಯಂತ್ರಣಕ್ಕಾಗಿ ಪ್ರತಿ ಎಕರೆಗೆ 5ರಂತೆ ಮೋಹಕ ಬಲೆ ಅಳವಡಿಸಬೇಕು. ಕೀಟದ ಬಾಧೆ ಹೆಚ್ಚಾದಾಗ ಬೇವಿನ ಕಷಾಯ 2ಎಂಎಲ್ ಹಾಗೂ ಕೀಟನಾಶಕ ಇಮಾಮ್ಯಾಕ್ಟಿನ್ ಬೆಂಜೋಟ್ 0.4ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪರಣೆ ಮಾಡಬೇಕು ಎಂದು ಮಾಹಿತಿ ನೀಡಿದರು.

ಬೆಳೆಯು ಶೇ.50ರಷ್ಟು ಹೂವಾಡುವ ಹಂತದಲ್ಲಿದ್ದಾಗ ಪಲ್ಸ್ ಮ್ಯಾಜಿಕ್ 7.5 ಗ್ರಾಂ. ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಅದರ ಜೊತೆಗೆ ಸಸ್ಯ ಪ್ರಚೋದಕ 0.4 ಎಂಎಲ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು.

2ನೇ ಸಿಂಪರಣೆಯನ್ನು 15 ದಿನಗಳ ಅಂತರದಲ್ಲಿ ಸಿಂಪರಣೆ ಮಾಡುವುದರಿಂದ ಹೂವು ಉದುರುವುದು ಕಡಿಮೆಯಾಗುವುದರ ಜತೆಗೆ ಕಾಯಿ ಮತ್ತು ಕಾಳುಗಳ ಗಾತ್ರ ಹೆಚ್ಚಾಗಿ ಇಳುವರಿ ಹಾಗೂ ತೂಕ ಹೆಚ್ಚಾಗುತ್ತದೆ ಎಂದು ವಿವರಿಸಿದರು.

error: Content is protected !!