ದಾವಣಗೆರೆ, ಜು. 25- ಡಾನ್ ಬಾಸ್ಕೋ ಸಂಸ್ಥೆ, ದಾವಣಗೆರೆ, ಬ್ರೆಡ್ಸ್ ಸಂಸ್ಥೆ ಬೆಂಗಳೂರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರ ಹಾಗೂ ವಿವಿಧ ಸ್ಥಳೀಯ ಇಲಾಖೆಗಳು, ಸಮುದಾಯ ಸಹಭಾಗಿದಾರರು ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ರಕ್ಷಣಾ ಜಾಲಬಂಧ ಮತ್ತು ಮಕ್ಕಳ ರಕ್ಷಣಾ ವಿಧಾನಗಳ ಮನವರಿಕೆ ಕಾರ್ಯಕ್ರಮವನ್ನು ಗಾಂಧಿನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮೊನ್ನೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ಕುಮಾರ್ ಅವರು ಬಾಲಕಾರ್ಮಿಕತೆ, ಪೋಷಕ ರಹಿತ, ಚಿಂದಿ-ಗುಜರಿ ಆರಿಸುವುದು, ಭಿಕ್ಷಾಟನೆ, ಪೋಷಕ ರಹಿತ ಮತ್ತು ಕಾಣೆಯಾದ ಹಾಗೂ ಇನ್ನಿತರೆ ದುಸ್ಥಿತಿಯಲ್ಲಿರುವ ಮಕ್ಕಳ ರಕ್ಷಣೆಗಾಗಿ ಮಕ್ಕಳ ರಕ್ಷಣಾ ಜಾಲಬಂಧ ಯೋಜನೆ ಮಕ್ಕಳ ಹಕ್ಕುಗಳ ರಕ್ಷಣೆಯ ಮಾನವೀಯ ಕಾರ್ಯಕ್ರಮವಾಗಿದೆ ಎಂದು ಶ್ಲ್ಯಾಘಿಸಿದರು. ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಅವರ ಸರ್ವಾಂಗೀಣ ಅಭಿವೃದ್ಧಿಯ ನಿಟ್ಟಿನಲ್ಲಿ ಇಂತಹ ಯೋಜನೆಗಳು ರಾಜ್ಯಾದ್ಯಂತ ವಿಸ್ತರಿಸಬೇಕಾದ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ದಾವಣಗೆರೆ ನಗರ ಮಕ್ಕಳ ಸ್ನೇಹಿ ನಗರವಾಗಿ ಹೊರಹೊಮ್ಮಲಿ ಎಂದು ತಿಳಿಸಿದರು.
ಬಡವರು ಮತ್ತು ಶೋಷಿತರ, ಅಬಲರ ಸೇವೆ ಮಾಡುವವರು ಪ್ರಪಂಚದ ಇತಿಹಾಸದಲ್ಲಿ ಚಿರಸ್ತಾಯಿಯಾಗಿ ಉಳಿದಿರುತ್ತಾರೆ. ಮಾನವ ಸಮಾಜದ ಉನ್ನತಿಗಾಗಿ ದುಡಿದ ಬುದ್ಧ, ಬಸವ, ಅಂಬೇಡ್ಕರ್, ಮಹಾತ್ಮಾ ಗಾಂಧಿ ಹಾಗೂ ಮದರ್ ತೆರೇಸಾ ಅವರು ಇಂದಿನ ಮಕ್ಕಳಿಗೆ ಆದರ್ಶವಾಗಿ ದ್ದಾರೆ ಎಂದರು. ಶಿಕ್ಷಣ ಮತ್ತು ಆರೋಗ್ಯಗಳ ಒಳಿತಿಗಾಗಿ ಹಾಗೂ ಮಕ್ಕಳ ಸುರಕ್ಷತೆಗಾಗಿ ಎಲ್ಲರೂ ಒಗ್ಗೂಡಿ ಕಾರ್ಯ ಪ್ರವೃತ್ತರಾಗಬೇಕಾಗಿರುವುದು ಇಂದಿನ ಅನಿವಾರ್ಯತೆಯಾಗಿದೆ, ಡಾನ್ ಬಾಸ್ಕೋ ಸಂಸ್ಥೆಯು ಇಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ದಾವಣಗೆರೆ ನಗರವನ್ನು `ಮಕ್ಕಳ ಸ್ನೇಹಿ’ ನಗರವನ್ನಾಗಿಸಲು `ಚೈಲ್ಡ್ ಸೇಫ್ಟಿ ನೆಟ್ (ಮಕ್ಕಳ ಸುರಕ್ಷತಾ ಜಾಲಬಂಧ) ಯೋಜನೆಯೊಂದನ್ನು ಜಾರಿಗೊಳಿಸಿ ಅನುಷ್ಟಾನಗೊಳಿಸುತ್ತಿರುವುದು ಸಮಂಜಸವಾಗಿದೆ ಮತ್ತು ಡಾನ್ ಬಾಸ್ಕೋ ಸಂಸ್ಥೆಯು ಇಂದು ಎಲ್ಲಾ ಮಕ್ಕಳಿಗೆ ನೋಟ್ಬುಕ್ಸ್ ಮತ್ತು ಪೆನ್ನುಗಳನ್ನು ವಿತರಣೆ ಮಾಡುವ ಮೂಲಕ ಮಕ್ಕಳಿಗೆ ಶಾಲೆ ಬಿಡದಂತೆ ಹುರಿದುಂಬಿಸು ತ್ತಿರುವುದು ಪ್ರಶಂಸನೀಯವೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಫಾ. ರೆಜಿ ಜೇಕಬ್ ಅವರು ಮಕ್ಕಳ ರಕ್ಷಣೆ ಮತ್ತು ಸುರಕ್ಷತೆಗಾಗಿ ಜಿಲ್ಲೆಯಾದ್ಯಂತ ಎಲ್ಲರನ್ನೂ ಒಳಗೊಂಡ ಸುರಕ್ಷತಾ ಪರದೆಯನ್ನು ಬಿಗಿಗೊಳಿಸ ಬೇಕಾಗಿದೆ. ಡೆಂಗ್ಯೂದಿಂದ ರಕ್ಷಣೆ ಪಡೆಯಲು ಹೇಗೆ ಎಲ್ಲರೂ ಸೊಳ್ಳೆ ಪರದೆಯನ್ನು ಬಳಸುತ್ತೇವೋ ಹಾಗೆ ಮಕ್ಕಳ ಸುರಕ್ಷತೆಗೂ ಒಂದು ಸುರಕ್ಷತಾ ಪರದೆಯನ್ನು ಗಟ್ಟಿಗೊಳಿಸೋಣ ಎಂದರು.
ಭಾಷಾ ನಗರ ಆಸ್ಪತ್ರೆಯ ಡಾ. ಶ್ರೀಮತಿ ರೇಖಾ, ಶ್ರೀಮತಿ ಸುಧಾ, ಶ್ರೀಮತಿ ಜಯಮ್ಮ, ಏಡ್ ಸಂಸ್ಥೆಯ ಕಾರ್ಯದರ್ಶಿಗಳಾದ ಡಿ.ಎಸ್. ಬಾಬಣ್ಣ, ಮುಖ್ಯೋಪಾಧ್ಯಾಯರಾದ ಸೋಮಶೇಖರ್, ಆರ್.ಯು. ಮೊದಲಾದವರು ಉಪಸ್ಥಿತರಿದ್ದರು.
ಶ್ರೀಮತಿ ಪಾರ್ವತಮ್ಮ ಪ್ರಾರ್ಥಿಸಿದರು. ಸಿ.ಎಸ್.ಎನ್. ಯೋಜನೆಯ ಸಂಯೋಜಕರಾದ ಚೈಲ್ಡ್ ರೈಟ್ಸ್ ಆಕ್ಟಿವಿಸ್ಟ್ ಬಿ. ಮಂಜಪ್ಪ ನಿರೂಪಣೆ ಮಾಡಿದರು. ಎಂ.ಹೊನ್ನಪ್ಪ ಸ್ವಾಗತಿಸಿದರು. ಹೆಚ್. ನಾಗರಾಜ್ ವಂದಿಸಿದರು.