ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ಇದ್ದರೂ ಸಾರ್ವಜನಿಕರಿಗೆ ಪ್ರತ್ಯೇಕ ಖಾಸಗಿ ಔಷಧಿ ಅಂಗಡಿಗೆ ಬರೆಯುವ ವೈದ್ಯರು!

ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ಇದ್ದರೂ ಸಾರ್ವಜನಿಕರಿಗೆ ಪ್ರತ್ಯೇಕ ಖಾಸಗಿ ಔಷಧಿ ಅಂಗಡಿಗೆ ಬರೆಯುವ ವೈದ್ಯರು!

ಹರಿಹರದಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಆರೋಗ್ಯ ಅಧಿಕಾರಿಗಳಿಗೆ ಮನವಿ

ಹರಿಹರ, ಜು.25- ನಗರದ ಸರ್ಕಾರಿ ಸಾರ್ವಜನಿಕ  ಆಸ್ಪತ್ರೆಯಲ್ಲಿನ ವೈದ್ಯರುಗಳ ಬಳಿ ಚಿಕಿತ್ಸೆ ಪಡೆಯಲು ಬರುವ ರೋಗಿಗಳಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಲ್ಲಿ ಔಷಧಿಗಳು ಇದ್ದರೂ ಸಹ ಔಷಧಿಗಳನ್ನು ಪ್ರತ್ಯೇಕ ಔಷಧಿ (ಖಾಸಗಿ) ಅಂಗಡಿಗಳಿಂದ ತರಲು ಚೀಟಿಯನ್ನು ಬರೆದುಕೊಡುತ್ತಿದ್ದಾರೆ ಎಂದು ಆರೋಪಿಸಿ, ಜಯಕರ್ನಾಟಕ ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಸಿ, ಆರೋಗ್ಯ ಅಧಿಕಾರಿಗಳಾದ ಡಾ.ಹನುಮನಾಯ್ಕ್ ಮತ್ತು ಡಾ.ಅಬ್ದುಲ್ ಖಾದರ್ ಅವರಿಗೆ ಮನವಿ ಅರ್ಪಿಸಿದರು. 

ಈ ವೇಳೆ ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಎ.ಗೋವಿಂದ ಮಾತನಾಡಿ,  ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಖಾಸಗಿ ಔಷಧಿ ಅಂಗಡಿಗಳಲ್ಲಿ ಔಷಧಿ ಪಡೆಯುವಂತೆ ಚೀಟಿ ನೀಡುವುದರಿಂದ ಸರ್ಕಾರಿ ಆಸ್ಪತ್ರೆಯನ್ನು ಅವಲಂಬಿಸಿಕೊಂಡು ನಂಬಿ ಬರುವ ಬಡ ರೋಗಿಗಳಿಗೆ ತೊಂದರೆ ಉಂಟಾಗುತ್ತಿದೆ. ಅದರಲ್ಲಿ ಆರ್ಥಿಕವಾಗಿ ಕಡು ಬಡವರಾಗಿದ್ದು, ಕೂಲಿ ಮಾಡಿಕೊಂಡು ಗ್ರಾಮಾಂತರ ಪ್ರದೇಶದಿಂದ ತಮ್ಮ ಸ್ವಂತ ಖರ್ಚಿನಲ್ಲಿ ಬರುವ ರೋಗಿಗಳು ಹಾಗೂ ನಗರದಲ್ಲಿರುವ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಂದಂತ ರೋಗಿಗಳಿಗೆ ಅಸಮಾಧಾನ ಉಂಟಾಗಿದೆ. 

ಆದ್ದರಿಂದ  ಈ ಕೂಡಲೇ ಸರ್ಕಾರಿ
ಆಸ್ಪತ್ರೆಯಲ್ಲಿ ಎಲ್ಲಾ ಔಷಧಿಗಳ ಲಭ್ಯತೆ ದೊರೆಯುವಂತೆ ಆಗಬೇಕು ಹಾಗೂ ಜನ ಔಷಧಿ ಕೇಂದ್ರದಲ್ಲಿ ವ್ಯವಸ್ಥಿತವಾದ ಔಷಧಿಗಳನ್ನು ದೊರಕುವಂತೆ ಆಗಬೇಕು ಮತ್ತು ಗರ್ಭಿಣಿಯರಿಗೆ ಸ್ಕ್ಯಾನಿಂಗ್ ವ್ಯವಸ್ಥೆ ಇರುವುದಿಲ್ಲ ಹಾಗೂ ಥೈರಾಯ್ಡ್ ಟೆಸ್ಟಿಂಗ್ ಇರುವುದಿಲ್ಲ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ತಕ್ಷಣವೇ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಔಷಧಿಗಳನ್ನು ದೊರಕುವಂತೆ ಮಾಡಬೇಕು. 

ಯಾವುದೇ ರೋಗಿಗೆ ಹೊರಗಡೆಯಿಂದ ಔಷಧಿಗಳನ್ನು ತರುವಂತೆ ಚೀಟಿ ಬರೆದುಕೊಟ್ಟಲ್ಲಿ, ಔಷಧಿಗಳ ವೆಚ್ಚವನ್ನು ಆರೋಗ್ಯ ಇಲಾಖೆ ತುಂಬಿಕೊಡಬೇಕು ಹಾಗೂ ಸ್ಕ್ಯಾನಿಂಗ್ ಮತ್ತು ಥೈರಾಯ್ಡ್ ರಕ್ತ ಪರೀಕ್ಷೆ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿ ಕಲ್ಪಿಸಿ ಕೊಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ  ಜಯ ಕರ್ನಾಟಕ ಸಂಘಟನೆ  ಉಪಾಧ್ಯಕ್ಷ ಎಂ.ಆರ್. ಆನಂದ್, ಪ್ರಧಾನ
ಕಾರ್ಯದರ್ಶಿ ಸುನಿಲ್ ಕುಮಾರ್, ಶಬರೀಶ್,
ಸಿ.ಹೆಚ್.ಗ್ರಾಮ ಘಟಕದ ಅಧ್ಯಕ್ಷ ಭರತ್ ಭಾನುವಳ್ಳಿ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಶ್ರೀನಿವಾಸ್, ದಾದಾಪೀರ್, ಯೋಗೀಶ್, ಆದರ್ಶ್, ಸುದೀಪ್, ಮಹಾರುದ್ರ, ರಿಯಾಜ್, ರವಿ, ಪ್ರದೀಪ್, ಗಿರಿ, ಹನುಮಂತ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!