ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಭವನ ನಿರ್ಮಾಣ : ಸಂಸದ ತುಕಾರಾಮ್
ಹೂವಿನಹಡಗಲಿ, ಜು. 24- ಅಂಚೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ಖಾಲಿ ನಿವೇಶನ ಲಭ್ಯವಿದ್ದು, ನವಂಬರ್ ತಿಂಗಳ ದೀಪಾವಳಿಯಂದು 2 ಕೋಟಿ ರೂ.ಗಳ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಂಸದ ಈ. ತುಕಾರಾಮ್ ತಿಳಿಸಿದರು.
ಹಡಗಲಿ ಮತ್ತು ಇಟಿಗಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ದ್ರಾಕ್ಷಾಯಿಣಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಸದರ ಕೃತಜ್ಞತಾ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಲಕ್ಷ ಮತಗಳ ಅಂತರದಲ್ಲಿ ಗೆದ್ದು ಸಂಸದನಾಗಲು ಕಾರಣರಾಗಿರುವ ಅಖಂಡ ಬಳ್ಳಾರಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಭವನ ನಿರ್ಮಿಸಲು ಸಂಕಲ್ಪ ಮಾಡಿದ್ದೇನೆ ಎಂದರು.
ಸಂಸದರಿಗೆ ವರ್ಷಕ್ಕೆ 5 ಕೋಟಿ ಅನು ದಾನ ಬರುತ್ತದೆ. ಅದರಲ್ಲಿ ಈ ಭಾಗಕ್ಕೆ ನನ್ನಿಂದ ಯಾವ ಕೆಲಸ ಆಗಬೇಕು ಎಂಬು ದನ್ನು ತಿಳಿಸಿ ದರೆ, ಆ ಕೆಲಸ ಮಾಡಲು ಬದ್ಧನಾಗಿ ದ್ದೇನೆ. ನನಗೆ ತಂದೆ-ತಾಯಿ ಜನ್ಮ ಕೊಟ್ಟಿದ್ದರೆ, ನೀವು ರಾಜಕೀಯ ಜನ್ಮ ಕೊಟ್ಟಿ ದ್ದೀರಿ. ಆದ್ದರಿಂದ ನಿಮ್ಮ ಋಣ ತೀರಿಸುವ ಹೊಣೆಗಾರಿಕೆ ನನ್ನ ಮೇಲಿದೆ ಎಂದರು. ಯುವಕರ ಭವಿಷ್ಯ ರೂಪಿಸಲು ಬೇಕಾಗುವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೊದಲು ಜನಸ್ಪಂದನ ಸಭೆ ನಡೆಸುತ್ತೇನೆ. ಆ ಮೂಲಕ ಶಿಕ್ಷಣ, ಆರೋಗ್ಯ, ಕೃಷಿ, ಸೇರಿದಂತೆ, ಹಲವಾರು ಯೋಜನೆ ರೂಪಿಸುತ್ತೇನೆ ಎಂದು ಹೇಳಿದರು.
ಒಂದು ಕಾಲದಲ್ಲಿ ನನಗೆ ಹೊಟ್ಟೆಗೆ ಅನ್ನ, ಕಾಲಿಗೆ ಚಪ್ಪಲಿ ಇರಲಿಲ್ಲ. ಇಂತಹ ವ್ಯಕ್ತಿಗೆ ಮತದಾರರು ಆಶೀರ್ವಾದಗೊಳಿಸಿ, ಈ ಮಟ್ಟಕ್ಕೆ ಬೆಳೆಸಿರುವುದನ್ನು ನಾನು ಮರೆಯುವುದಿಲ್ಲ ಎಂದು ತಿಳಿಸಿದರು.
ಮಾಜಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ನಾನು ಸೋತಿರುವುದು ನಿಜ. ಆದರೆ ಅದು ಪಕ್ಷದ ಸೋಲಲ್ಲ ಎಂದ ಅವರು, 2 ದಶಕಗಳ ಕಾಲ ಬಳ್ಳಾರಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಕೈ ತಪ್ಪಿ ಹೋಗಿತ್ತು ಈಗ ತುಕಾರಾಮ್ ಮೂಲಕ ಕೈ ಹಿಡಿದಿದೆ ಎಂದು ಹೇಳಿದರು.
ತುಕಾರಾಮ್ರವರು ಚುನಾವಣೆ ವೇಳೆ ಕೊಟ್ಟ ಮಾತಿನಂತೆ ಸ್ಥಳ ಸಮಸ್ಯೆಯಿಂದ ನೆನೆಗುದಿಗೆ ಬಿದ್ದ ಉತ್ತಂಗಿ ಬಸ್ ನಿಲ್ದಾಣಕ್ಕೆ ಅನುದಾನ ಕೊಡಲು ಒಪ್ಪಿದ್ದಾರೆ ಎಂದರು.
ಈ ವೇಳೆ ಜಿ.ಪಂ. ಮಾಜಿ ಸದಸ್ಯ ಪಿ. ವಿಜಯಕುಮಾರ, ಅಟವಾಳಗಿ ಕೊಟ್ರೇಶ್, ಬಿ. ಹನುಮಂತಪ್ಪ, ಎಸ್. ದೂದಾನಾಯ್ಕ ಸೇರಿದಂತೆ ಇತರರು ಇದ್ದರು.