ನಗರಕ್ಕೆ 3 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲು ಒತ್ತಾಯ

ನಗರಕ್ಕೆ 3 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲು ಒತ್ತಾಯ

ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಪಾಲಿಕೆ ಬಿಜೆಪಿ ಸದಸ್ಯರ ನಿಯೋಗ

ದಾವಣಗೆರೆ, ಜು. 23- ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರು, ಉಪ ಮಹಾಪೌರರ ನೇತೃತ್ವದಲ್ಲಿ ಬಿಜೆಪಿ ಸದಸ್ಯರ ನಿಯೋಗವು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಪಾಲಿಕೆಯ ಹಲವಾರು ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಾಣಗೊಂಡು, ಉದ್ಘಾಟನೆ ಯಾಗಿ ಒಂದು ವರ್ಷ ಕಳೆದರೂ ಕೂಡ ಖಾಸಗಿ ಬಸ್ ನಿಲ್ದಾಣವನ್ನು ಸ್ಥಳಾಂತರಿಸಲು ಪಾಲಿಕೆ ಕ್ರಮ ಕೈಗೊಂಡಿರುವುದಿಲ್ಲ. ಕೂಡಲೇ ಖಾಸಗಿ ಬಸ್ ನಿಲ್ದಾಣ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳನ್ನು ಹೈಸ್ಕೂಲ್ ಮೈದಾನದಿಂದ ನೂತನವಾಗಿ ನಿರ್ಮಾಣ ಗೊಂಡಿರುವ ಬಸ್ ನಿಲ್ದಾಣಗಳಿಗೆ ಸ್ಥಳಾಂತರಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡ ಬೇಕೆಂದು, ಯೋಜನೆಯಿಂದ ನಿರ್ಮಾಣ ಗೊಂಡ ಕಟ್ಟಡಗಳನ್ನು ಉಪಯೋಗಿಸಿಕೊಳ್ಳುವವರಿಗೆ ಸೂಕ್ತ ನಿರ್ದೇಶನ ನೀಡಲು ಮನವಿ ಮಾಡಿದರು.

ಈಗಾಗಲೇ ಎರಡು ಬಾರಿ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಈ ಹಿಂದೆ ಇದ್ದಂತಹ ಜಿಲ್ಲಾಧಿಕಾರಿಗಳಿಗೂ ಮನವಿ ನೀಡಿ ಜಲಸಿರಿಯ ಕಾಮಗಾರಿ ಪೂರ್ಣಗೊಂಡು, ಸಮರ್ಪಕ ನೀರು ವಿತರಣೆ ಆಗುವವರೆಗೂ ಜಲಸಿರಿ ಯೋಜನೆಯಡಿ ಬಿಲ್ ವಿತರಿಸುತ್ತಿದ್ದು, ಸಾರ್ವಜನಿಕರಿಗೆ ನೀಡಬಾರದು ಎಂದು ಮನವಿ ಮತ್ತು ಪ್ರತಿಭಟನೆ ಮೂಲಕ ಆಗ್ರಹಿಸಿರುವ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಯಿತು.

ಬಿಲ್ ನೀಡದರಿರುವಂತೆ ಪಾಲಿಕೆಗೆ ಸೂಕ್ತ ನಿರ್ದೇಶನ ನೀಡಬೇಕು. ಕುಡಿಯುವ ನೀರಿನ ವಿತರಣೆಯಲ್ಲೂ ವಿಳಂಬವಾಗುತ್ತಿದ್ದು, ಮಳೆಗಾಲದಲ್ಲೂ ನೀರನ್ನು ವಿತರಿಸುವಲ್ಲಿ ವಿಫಲವಾಗಿದೆ ಎಂದು ದೂರಿದರು.

ಮೂರು ದಿನಗಳಿಗೊಮ್ಮೆ ನೀರು ಸರಬರಾಜು ಮಾಡುಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿಯೋಗದ ಸದಸ್ಯರು ಒತ್ತಾಯಿಸಿದರು.

ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಮುಂದಿನ ದಿನಗಳಲ್ಲಿ ಈ ಎಲ್ಲಾ ವಿಭಾಗವಾರು ಮತ್ತು ಪಾಲಿಕೆಯ ಎಲ್ಲಾ ಅನುಷ್ಠಾನ ಹಂತ ದಲ್ಲಿ ಇರುವ ಮತ್ತು ಅನುಷ್ಠಾನಗೊಳಿಸ ಬೇಕಾಗಿರುವ ಕಾಮಗಾರಿಗಳು ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಆಗಬೇಕಾದ ಯೋಜನೆಗಳ ಕುರಿತು ವಿಭಾಗವಾರು ಸಭೆ ಕರೆಯುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಉಪ ಮೇಯರ್ ಯಶೋಧ ಹೆಗ್ಗಪ್ಪ, ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್, ಮಾಜಿ ಮೇಯರ್ ಎಸ್.ಟಿ. ವೀರೇಶ್, ಗಾಯತ್ರಿ ಬಾಯಿ ಖಂಡೋಜಿರಾವ್, ಗೌರಮ್ಮ ಗಿರೀಶ್, ಕೆ.ಎಂ. ವೀರೇಶ್, ಮುಖಂಡರಾದ ಸುರೇಶ್, ಜಯಪ್ರಕಾಶ್ ಇದ್ದರು. 

error: Content is protected !!