ಹರಪನಹಳ್ಳಿ ಓದುಗ ಬಳಗದ ಉದ್ಘಾಟನಾ ಸಮಾರಂಭದಲ್ಲಿ ಡಾ.ಸಿದ್ದಲಿಂಗಮೂರ್ತಿ
ಹರಪನಹಳ್ಳಿ, ಜು.23- ವಿದ್ಯಾರ್ಥಿಗಳು ಪುಸ್ತಕ ಪ್ರೇಮಿಗಳಾಗಿ, ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಎಡಿಬಿ ಕಾಲೇಜಿನ ಪ್ರಾಂಶುಪಾಲ ಡಾ. ಸಿದ್ದಲಿಂಗಮೂರ್ತಿ ಹೇಳಿದರು.
ಪಟ್ಟಣದ ಎಡಿಬಿ ಮಹಾವಿದ್ಯಾಲಯದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, ಕನ್ನಡ ಸಂಘ ಮತ್ತು ಇಂಗ್ಲಿಷ್ ಲಿಟರರಿ ಅಸೋಸಿ ಯೇಷನ್ ಸಂಯುಕ್ತಾಶ್ರಯದಲ್ಲಿ ಎಡಿಬಿ ಪುಸ್ತಕ ಓದುಗ ಬಳಗದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಶಸ್ವಿ ಅಥವಾ ಟಾಪರ್ ವಿದ್ಯಾರ್ಥಿ ಯಾಗಲು ಹಾರ್ಡ್ ವರ್ಕ್‌ಗಿಂತ ಸ್ಮಾರ್ಟ್ ವರ್ಕ್ ಮುಖ್ಯ. ಅಧ್ಯಯನದ ಬಗ್ಗೆ ನಿಖರತೆ ಹೊಂದಿರುವ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಬೇಗನೆ ಯಶಸ್ಸು ಕಾಣುತ್ತಾರೆ. ನೀವು ಸಹ ಟಾಪರ್ ವಿದ್ಯಾರ್ಥಿಯಾಗಲು ಬಯಸಿದರೆ, ಧೈರ್ಯ ಕಳೆದುಕೊಳ್ಳಬೇಡಿ. ಶಾಲೆಯಲ್ಲಿ ಉತ್ತಮ ಗ್ರೇಡ್, ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ. ಆ ಮೂಲಕ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಅಧ್ಯಯನ ಹಾಗೂ ವೃತ್ತಿ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ತಿಪ್ಪೇಸ್ವಾಮಿ ಅವರು `ಬೆರಳ್‌ಗೆ ಕೊರಳ್ ‘ ಎಂಬ ವಿಷಯ ಕುರಿತು ಮಾತನಾಡಿ, ಏಕಲವ್ಯನು ಬಿಲ್ಲು ವಿದ್ಯೆ ಕಲಿಯುವ ಹಂಬಲದಿಂದ ದ್ರೋಣಾ ಚಾರ್ಯರ ಬಳಿಗೆ ಬರುತ್ತಾನೆ. ಆದರೆ ತಮ್ಮ ಮೆಚ್ಚಿನ ಶಿಷ್ಯ ಅರ್ಜುನನನ್ನು ಜಗತ್ತಿನ ಶ್ರೇಷ್ಠ ಬಿಲ್ಲುಗಾರನನ್ನಾಗಿ ಮಾಡುವ ಪಣ ತೊಟ್ಟಿದ್ದ ದ್ರೋಣರು, ಕ್ಷತ್ರಿಯ ರಲ್ಲದವರಿಗೆ ಹೇಳಿ ಕೊಡಲು ಇಚ್ಛಿಸದೆ, ಏಕಲವ್ಯ ನನ್ನು ಶಿಷ್ಯನಾಗಿ ಸ್ವೀಕರಿಸಲು ನಿರಾಕರಿಸುತ್ತಾರೆ. ನಿರಾಶನಾಗದ ಏಕಲವ್ಯನು, ದಿನವೂ ದೂರದಲ್ಲಿ ನಿಂತು ದ್ರೋಣಾಚಾರ್ಯರು ಕೌರವರಿಗೆ, ಪಾಂಡವರಿಗೆ ಹೇಳಿಕೊಡುತ್ತಿದ್ದ ವಿದ್ಯೆಯನ್ನು ಮನನ ಮಾಡಿಕೊಂಡು, ಕಾಡಿಗೆ ಮರಳಿ ದ್ರೋಣರ ಮಣ್ಣಿನ ಮೂರ್ತಿಯನ್ನು ಮಾಡಿ, ಅವರನ್ನೇ ತನ್ನ ಮಾನಸ ಗುರುವೆಂದು ಭಾವಿಸಿ ಬಿಲ್ಲು ವಿದ್ಯೆಯನ್ನು ಸ್ವತಃ ಸಾಧಿಸಿಕೊಳ್ಳುತ್ತಾನೆ.
ಅರ್ಜುನನು ಶ್ರೇಷ್ಟ ಬಿಲ್ವಿದ್ಯಾ ನಿಪುಣನಾಗ ಬೇಕೆಂಬ ಅತಿಯಾಸೆ ಹಾಗೂ ಅಸಹನೆಯ ಫಲವಾಗಿ ಗುರು ದ್ರೋಣನಿಗೆ ದುಂಬಾಲು ಬಿದ್ದು, ಏಕಲವ್ಯನ ಬೆರಳನ್ನು ಗುರು ಕಾಣಿಕೆಯಾಗಿ ಪಡೆಯುವ ವಸ್ತು ಈ ಕೃತಿಯಲ್ಲಿದೆ. ಗುರು-ಶಿಷ್ಯರ ಸಂಬಂಧದ ಬಗ್ಗೆ ಚೆನ್ನಾಗಿ ಮೂಡಿ ಬಂದಿದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಜಿ. ಬಿ. ನಾಗನಗೌಡ ಮಾತನಾಡಿ, ವಿದ್ಯಾರ್ಥಿಗಳು ಪಠ್ಯವನ್ನು ಹೊರತುಪಡಿಸಿ ಕಥೆ, ಕಾದಂಬರಿ, ಕವನ ಸಂಕಲನ, ವಿಚಾರ ಸಾಹಿತ್ಯ ಹಾಗೂ ಜೀವನ ಚರಿತ್ರೆಯಂತಹ ಗ್ರಂಥಗಳನ್ನು ಓದಿಕೊಂಡಾಗ ಮಾತ್ರ ಜ್ಞಾನ ವೃದ್ಧಿಯಾಗಲಿಕ್ಕೆ ಸಾಧ್ಯ. ಡಾ ಎ. ಪಿ. ಜೆ. ಅಬ್ದುಲ್ ಕಲಾಂ ಅವರು ಒಬ್ಬ ಕಡಲತೀರದ ಪೇಪರ್ ಮಾರಾಟ ಮಾಡುವ ಹುಡುಗ, ಈ ದೇಶದ ಶ್ರೇಷ್ಠ ವಿಜ್ಞಾನಿಯಾಗಿ ಹಾಗೂ ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ದೇಶದ ರಾಷ್ಟ್ರಪತಿಯಾಗಿದ್ದು ಪುಸ್ತಕ ಓದಿನಿಂದ ಮಾತ್ರ ಎಂದರು.
ಇತಿಹಾಸ ವಿಭಾಗದ ಡಾ. ಹಾದಿಮನಿ ರಮೇಶ್ ಅವರು `ಕಾಕನ ಕೋಟೆ’ ಪುಸ್ತಕದ ಬಗ್ಗೆ, ಸಸ್ಯಶಾಸ್ತ್ರ ವಿಭಾಗದ ಡಾ. ಗೋವರ್ಧನ ಅವರು ದೇವನೂರು ಮಹಾದೇವ ಅವರ `ಎದೆಗೆ ಬಿದ್ದ ಅಕ್ಷರ’ ಪುಸ್ತಕದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.
ವಿದ್ಯಾರ್ಥಿಗಳಾದ ಹರೀಶ, ಚನ್ನವೀರ, ತಿಮ್ಮೇಶ್ ಮತ್ತು ಸಂಪ್ರೀತ ಅವರುಗಳು ತಮ್ಮ ಮೆಚ್ಚಿನ ಪುಸ್ತಕಗಳ ಬಗ್ಗೆ ವೇದಿಕೆಯ ಮೇಲೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಂಥಪಾಲಕ ಬಸಲಿಂಗಪ್ಪ ಕಲ್ಮನಿ, ದೈಹಿಕ ಶಿಕ್ಷಣ ನಿರ್ದೇಶಕ ನವಾಜ್ ಬಾಷಾ ಸಿ, ಅರ್ಥಶಾಸ್ತ ವಿಭಾಗದ ಮುಖ್ಯಸ್ಥ ಡಾ. ಅಣ್ಣೇಶ್ ಆರ್, ಶಿಕ್ಷಣಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸುವರ್ಣ ಆರುಂಡಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.