ಪ್ರತಿಭೆ ಯಾವುದೇ ಜಾತಿ, ಸಮುದಾಯದ ಸೊತ್ತಲ್ಲ

ಪ್ರತಿಭೆ ಯಾವುದೇ ಜಾತಿ, ಸಮುದಾಯದ ಸೊತ್ತಲ್ಲ

ಹೆಚ್.ಆಂಜನೇಯ ಚಾರಿಟೇಬಲ್ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಚಿತ್ರದುರ್ಗ, ಜು. 22 –  ಪ್ರತಿಭೆ ಯಾವುದೇ ಒಂದು ಜಾತಿ-ಸಮುದಾಯದ ಸ್ವತ್ತಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಹೆಚ್.ಆಂಜನೇಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿನ್ನೆ ಇಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಶ್ರಮಿಕ ಸಂಸ್ಕೃತಿಯ ಮಕ್ಕಳಿಗೆ ಸನ್ಮಾನಿಸಿ, ಪ್ರೋತ್ಸಾಹಿಸಿ ಅವರು ಮಾತನಾಡಿದರು.

ಚತುರ್ವರ್ಣ ವ್ಯವಸ್ಥೆಯಲ್ಲಿ ಮೇಲಿನವರಿಗೆ ಮಾತ್ರ ಎಲ್ಲಾ ಅವಕಾಶಗಳು ಸಿಗುತ್ತವೆ. ಶೂದ್ರರು, ಶೋಷಿತರು, ಪರಿಶಿಷ್ಟ ಜಾತಿಗಳವರು ಮತ್ತು ಮೇಲ್ಜಾತಿಯ ಮಹಿಳೆಯರೂ ಕೂಡ ಶಿಕ್ಷಣದಿಂದ ವಂಚಿತರಾಗಿದ್ದರು ಎಂದರು.

ಶಿಕ್ಷಣ ಸ್ವಾಭಿಮಾನ ಬೆಳೆಸುತ್ತದೆ. ವೈಜ್ಞಾನಿಕ ಮತ್ತು ವೈಚಾರಿಕವಾದ ಶಿಕ್ಷಣ ಅಗತ್ಯ. ಹಣೆಬರಹ, ಗ್ರಹಚಾರ ಎನ್ನುವ ಮೌಢ್ಯವನ್ನು ವಿದ್ಯಾವಂತರೇ ನಂಬುತ್ತಾರೆ. ಇಂಥಾ ಶಿಕ್ಷಣ ಪಡೆದು ಪ್ರಯೋಜನ ಏನು ಪ್ರಶ್ನಿಸಿದ ಸಿದ್ದರಾಮಯ್ಯ ಅವರು ಕುವೆಂಪು ಅವರ ಆಶಯದ ವೈಚಾರಿಕ ಶಿಕ್ಷಣ ಅಗತ್ಯ ಎಂದರು.

ಯಾವ ವ್ಯವಸ್ಥೆಯಲ್ಲಿ ಚಲನೆ ಇರುವುದಿಲ್ಲವೋ ಆ ಸಮಾಜದಲ್ಲಿ ಪ್ರಗತಿ ಸಾಧ್ಯವಿಲ್ಲ. ಮಾದಿಗ ಸಮುದಾಯದ 90 ಕ್ಕೂ ಹೆಚ್ಚು ವಿದ್ಯಾರ್ಥಿಗಳು 90% ಗಿಂತ ಹೆಚ್ಚು ಗಳಿಸಿ ಇಂದು ಸನ್ಮಾನಿತರಾದರು. ಇದು ಅತ್ಯಂತ ಖುಷಿಯ ವಿಷಯ ಎಂದರು.

ಈ ಸಂದರ್ಭದಲ್ಲಿ ಶೇ 98 ರಷ್ಟು ಅಂಕ ಪಡೆದು ರಾಜ್ಯಕ್ಕೆ  8ನೇ ರಾಂಕ್‌ ಗಳಿಸಿದ ಸನ್ಮಾನಿತ ಪಿಯುಸಿ ವಿದ್ಯಾರ್ಥಿನಿಗೆ, ನೀನು ಐಎಎಸ್‌ ಮಾಡು. ಬೇಕಾದ ಎಲ್ಲಾ ಸಹಾಯವನ್ನು ನಾನು ಮಾಡುತ್ತೇನೆ ಎಂದು ಭರವಸೆ ನೀಡಿದರು. ನಾನು ಅಂಬೇ ಡ್ಕರ್ ಆಗಲು ಯಾವತ್ತೂ ಸಾಧ್ಯವಿಲ್ಲ. ಆದರೆ ಅಂಬೇಡ್ಕರ್ ಆಶಯ ಮತ್ತು ನಿಲುವುಗಳೇ ನನ್ನ ನಿಲುವುಗಳು ಆಗಿವೆ ಎಂದರು.

ಸಿರಿಗೆರೆ ಮಠದ ಪೀಠಾಧ್ಯಕ್ಷರಾದ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾ ಕರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕರುಗಳಾದ ವೀರೇಂದ್ರ ಪಪ್ಪಿ, ರಘುಮೂರ್ತಿ, ಕೆ.ಎಸ್. ಬಸವಂತಪ್ಪ, ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ಸಂಸದ ಚಂದ್ರಪ್ಪ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

error: Content is protected !!