ದಾವಣಗೆರೆ, ಜು.22- ಬೆಂಗಳೂರಿನಲ್ಲಿ ನಿನ್ನೆ ಜರುಗಿದ ರಾಜ್ಯಮಟ್ಟದ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿ ಯಲ್ಲಿ ಭಾಗವಹಿಸಿದ್ದ ನಗರದ ಎಸ್ಎಸ್ಐಎಂಎಸ್ ಮೆಡಿಕಲ್ ಕಾಲೇಜಿನ ಪುರುಷರ ಬಾಸ್ಕೆಟ್ ಬಾಲ್ ತಂಡವು ಪ್ರಥಮ ಸ್ಥಾನ ಗಳಿಸಿದರೆ, ಕಾಲೇಜಿನ ಮಹಿಳಾ ತಂಡವು ದ್ವಿತೀಯ ಸ್ಥಾನ ಪಡೆದಿದೆ.
ಉತ್ತಮ ಪ್ರದರ್ಶನ ನೀಡಿದ ಆದಿತ್ಯ ವಶಿಷ್ಠ ಹಾಗೂ ಜೀವಿತಾ ಅವರು ಪಂದ್ಯಾವಳಿಯ ಅತ್ಯುತ್ತಮ ಪುರುಷ ಮತ್ತು ಮಹಿಳಾ ಕ್ರೀಡಾಳು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ಸಂಸ್ಥೆ ವತಿಯಿಂದ ಬೆಂಗಳೂರಿನ ಆದಿತ್ಯ ಫಾರ್ಮಸಿ ಕಾಲೇಜು ಆವರಣದಲ್ಲಿ ರಾಜ್ಯ ಮಟ್ಟದ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು.
ಇದರಲ್ಲಿ ರಾಜ್ಯಾದ್ಯಂತ ಇರುವ ಎಲ್ಲ ಮೆಡಿಕಲ್, ಡೆಂಟಲ್, ನರ್ಸಿಂಗ್, ಫಾರ್ಮಸಿ, ಆಯುರ್ವೇದ ಹೋಮಿಯೋಪತಿ ಕಾಲೇಜುಗಳು ಭಾಗವಹಿಸಿದ್ದವು. ನಗರದ ಎಸ್ಎಸ್ಐಎಂಎಸ್ ಕಾಲೇಜಿನ ತಂಡಗಳು ಭಾಗವಹಿಸಿ ಎರಡೂ ವಿಭಾಗಗಳಲ್ಲಿ ಜಯಶಾಲಿಯಾಗಿದ್ದಾರೆ.
ಕಾಲೇಜಿಗೆ ಕೀರ್ತಿ ತಂದಿರುವ ಎಲ್ಲಾ ಕ್ರೀಡಾಪಟುಗಳನ್ನು ಸಂಸ್ಥೆಯ ಪ್ರಮುಖ ಪೋಷಕರಾದ ಶಾಮನೂರು ಶಿವಶಂಕರಪ್ಪ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಸಂಸ್ಥೆಯ ಪ್ರಾಂಶುಪಾಲ ಡಾ. ಬಿ. ಎಸ್. ಪ್ರಸಾದ್, ಮೆಡಿಕಲ್ ಡೈರೆಕ್ಟರ್ ಡಾ. ಅರುಣ್ ಕುಮಾರ್ ಅಜ್ಜಪ್ಪ, ಮ್ಯಾನೇಜರ್ ರವಿ ಆರ್.ಜಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ವಿನೋದ್ ಕುಮಾರ್, ಕ್ರೀಡಾ ಸಮಿತಿ ಅಧ್ಯಕ್ಷ ಡಾ. ಸತೀಶ್ ಪಾಟೀಲ್, ಸಂಸ್ಥೆಯ ದೈಹಿಕ ಶಿಕ್ಷಕ ವಿಷ್ಣು ಅವರು ಅಭಿನಂದಿಸಿದ್ದಾರೆ.